ಜಿಲ್ಲೆ

ಮೀನು ಕೃಷಿಯಿಂದ ಉತ್ತಮ ಲಾಭ ಗಳಿಸಬಹುದು

ಮಡಿಕೇರಿ:

ಮೀನುಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ನಡೆಸಲು ಬೇಕಾದ ಎಲ್ಲಾ ಅವಕಾಶಗಳು ಲಭ್ಯವಿದೆ ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದರು. ಕೊಡಗು ಜಿಲ್ಲಾ ಪಂಚಾಯಿತಿ ಮತ್ತು ಕೊಡಗು ಜಿಲ್ಲೆ ಮೀನುಗಾರಿಕೆ ಇಲಾಖೆ ವತಿಯಿಂದ ಕುಶಾಲನಗರದ ಕೇರಳ ಸಮಾಜದಲ್ಲಿ ಗುರುವಾರ ಆಚರಿಸಲಾದ 2025ನೇ ಸಾಲಿನ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೀನುಗಾರಿಕೆಯ ವ್ಯಾಪ್ತಿ ಬಹಳ ವಿಶಾಲವಾಗಿದ್ದು ಕೃಷಿ ಹೊಂಡಗಳಲ್ಲಿ ಮೀನು ಕೃಷಿ ಮಾತ್ರವಲ್ಲದೇ ಮೀನಿನ ಉತ್ಪನ್ನ ಮಾರಾಟ, ಮೀನಿನ ಕ್ಯಾಂಟೀನ್, ಗ್ರಾಮ ಪಂಚಾಯಿತಿ ಕೆರೆಗಳಲ್ಲಿ ಮೀನುಗಾರಿಕೆ ಮಾಡುವುದರ ಮೂಲಕ ಲಾಭದಾಯಕ ಮೀನುಗಾರಿಕೆಯನ್ನು ನಡೆಸಬಹುದು ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಸಚಿನ್ ಕೃತಕ ವಿಧಾನದ ಮೂಲಕ ಮೀನಿನ ಮರಿಗಳ ಉತ್ಪಾದನೆಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಮತ್ಸö್ಯ ವಿಜ್ಞಾನಿಗಳಾದ ಹಿರಾಲಾಲ್ ಚೌಧರಿ ಮತ್ತು ಅಲಿಕುನ್ನಿ ಇವರ ಜ್ಞಾಪಕಾರ್ಥ ಪ್ರತೀ ವರ್ಷ ಜುಲೈ 10ನ್ನು ರಾಷ್ಟ್ರೀಯ ಮೀನು ಕೃಷಿಕರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಪ್ರಗತಿಪರ ಮೀನು ಕೃಷಿಕ ಮಂದ್ರೀರ ತೇಜಸ್ ನಾಣಯ್ಯ ಮೀನು ಕೃಷಿಯಲ್ಲಿ ತಮ್ಮ ಅನುಭವವನ್ನು ಕೃಷಿಕರರೊಂದಿಗೆ ಹಂಚಿಕೊAಡರು.

ಪ್ರಗತಿಪರ ಮೀನು ಕೃಷಿಕರಾದ ಕುಶಾಲನಗರದ ವಿಜಯ್ ಕುಮಾರ್ ಮತ್ತು ಪೊನ್ನಂಪೇಟೆಯ ಡೈಸಿ ತಿಮ್ಮಯ್ಯ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮೀ, ಕಾವೇರಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಮಿಲನ ಕೆ. ಭರತ್, ಸಚಿನ್, ಸಿಬ್ಬಂದಿ ಹೇಮಂತ್, ರೋಶನ್, ರಂಜಿತ್, ವಿನಯ್, ಮಂಜು ತಾಲೂಕುಗಳಿಂದ ಆಗಮಿಸಿದ್ದ ಮೀನು ಕೃಷಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ನಂತರ ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ಕಾವೇರಿ ನದಿಗೆ ಮೀನು ಮರಿಗಳನ್ನು ಬಿಡಲಾಯಿತು.