ಮಂಗಳೂರು: ಮರ್ಲಿನ್(ತುಳುವಿನಲ್ಲಿ ಮಡಲ್)ಎಂದು ಕರೆಯಲಾಗುವ ಮೀನು ಡಿಕ್ಕಿ ಹೊಡೆದು ಮೀನುಗಾರಿಕೆಗೆ ತೆರಳಿದ್ದ ಬೋಟ್‌ಗೆ ಹಾನಿಯಾಗಿದೆ. ಬೋಟ್‌ನಲ್ಲಿದ್ದವರು ಚಿತ್ರೀಕರಣ ಮಾಡಿದ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೊಡ್ಡ ಗಾತ್ರದ ಚೂಪು ಬಾಯಿ ಹೊಂದಿರುವ ಮೀನು ಆಳ ಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಬೋಟ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಅದರ ಕೊಂಬು ಮುರಿದು ರಕ್ತಸ್ರಾವವಾಗಿದೆ. ಜತೆಗೆ ಬೋಟ್‌ನ ಅಡಿ ಭಾಗ ಎರಡು ಇಂಚು ಅಗಲದಲ್ಲಿ ತೂತಾಗಿದೆ.
ನಾಲ್ಕು ದಿನಗಳ ಹಿಂದೆ ಘಟನೆ ನಡೆದಿದ್ದು, ಮಂಗಳೂರು ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಉಳ್ಳಾಲದ ಬೊಕ್ಕಪಟ್ಣದ ಜಲಕಿರಣ್ ಎಂಬ ಹೆಸರಿನ ದೋಣಿಗೆ ಮೀನು ಡಿಕ್ಕಿ ಹೊಡೆದಿತ್ತು. ಬಳಿಕ ಸುಮಾರು ಹೊತ್ತು ಬೋಟ್‌ನ ಸಮೀಪದಲ್ಲೇ ಮೀನು ಈಜುತ್ತಿತ್ತು. ಈ ವೇಳೆ ರಕ್ತಸ್ರಾವ ಆಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ದೋಣಿಯನ್ನು ರಿಪೇರಿಗೆ ಇಡಲಾಗಿದೆ.
ಏನಿದು ಮರ್ಲಿನ್ ಮೀನು?: ಮರ್ಲಿನ್ ಮೀನು ಲಕ್ಷದ್ವೀಪ ಆಸುಪಾಸಿನಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಅಲ್ಲಿ ಸಮುದ್ರ ಎರಡು ಸಾವಿರ ಅಡಿ ಆಳವಿದೆ. ಇಂತಹ ಜಾಗದಲ್ಲಿ ಈ ಮೀನುಗಳು ಹೆಚ್ಚಾಗಿರುತ್ತವೆ. ಈ ಮೀನುಗಳ ಕೊಂಬು ಈಟಿಯಂತೆ ಚೂಪು ಹಾಗೂ ಗಟ್ಟಿಯಾಗಿರುತ್ತದೆ. ಇದರ ಹತ್ತಿರ ಬರುವ ದೊಡ್ಡ ಗಾತ್ರದ ಮೀನುಗಳನ್ನು ಈ ಕೊಂಬಿನಿಂದ ಗುದ್ದಿ ಕೊಲ್ಲುತ್ತವೆ. ಈ ಮೀನುಗಳು 150ರಿಂದ 200 ಕಿ.ಗ್ರಾಂ. ತೂಗುತ್ತವೆ. ಬೋಟ್‌ಗೆ ಗುದ್ದಿದ ಮೀನಿನ ಮುಂಭಾಗದ ತುದಿ ಬೋಟ್‌ನಲ್ಲಿ ಸಿಕ್ಕಿಹಾಕಿಕೊಂಡಿದೆ. ಹೀಗಾಗಿ ಬೋಟ್‌ಗೆ ಹೆಚ್ಚಿನ ಅಪಾಯವಾಗಿಲ್ಲ. ಇಲ್ಲದಿದ್ದರೆ ನೀರು ತುಂಬಿ ಬೋಟ್‌ಗೆ ಅಪಾಯ ಆಗುವ ಸಾಧ್ಯತೆ ಇತ್ತು ಎಂದು ಮೀನುಗಾರರು ತಿಳಿಸಿದ್ದಾರೆ.