ಜಿಲ್ಲೆ

ರೈಲಲ್ಲೂ ಸಿಗಲಿದೆ ಮೀನಿನ ಚಿಪ್ಸ್, ಉತ್ಪನ್ನ ಪೂರೈಕೆ, ಮಾರಾಟ ಸಂಬಂಧ ತಿಂಗಳಲ್ಲಿ ಕೆಎಫ್‌ಡಿಸಿ- ರೈಲ್ವೆ ನಡುವೆ ಒಡಂಬಡಿಕೆ

ಪ್ರಕಾಶ್ ಮಂಜೇಶ್ವರ ಮಂಗಳೂರು

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ (ಕೆಎಫ್‌ಡಿಸಿ) ಬ್ರಾಂಡ್ ಮತ್ತು ಮತ್ಸೃಬಂಧು ಸಂಸ್ಥೆಯ ಸಹಯೋಗದಲ್ಲಿ ಮಾರುಕಟ್ಟೆಗೆ ಪರಿಚಯಿಸಲಾದ ಮೀನಿನ ಚಿಪ್ಸ್ ದೇಶದ ವಿವಿಧೆಡೆ ರೈಲು ಹಾಗೂ ರೈಲು ನಿಲ್ದಾಣಗಳಲ್ಲಿ ಗ್ರಾಹಕರಿಗೆ ಲಭಿಸುವ ದಿನ ದೂರವಿಲ್ಲ!

ಪ್ರಸ್ತಾವಿತ ಯೋಜನೆ ಸಂಬಂಧಿಸಿ ಪತ್ರ ವ್ಯವಹಾರ ಮುಕ್ತಾಯ ಹಂತದಲ್ಲಿದ್ದು, ರೈಲ್ವೆ ಇಲಾಖೆಯ ತಜ್ಞರ ತಂಡ ಮೀನಿನ ಚಿಪ್ಸ್‌ಗಳನ್ನು ಪರೀಕ್ಷಿಸಿ ‘ಎ’ ಗ್ರೇಡ್ ಪ್ರಮಾಣಪತ್ರ ಒದಗಿಸಿದೆ. ಉತ್ಪನ್ನಗಳ ಪೂರೈಕೆ ಮತ್ತು ಮಾರಾಟ ಸಂಬಂಧಿಸಿ ತಿಂಗಳೊಳಗೆ ರೈಲ್ವೆ ಮತ್ತು ಕೆಎಫ್‌ಡಿಸಿ ಜೊತೆ ಒಡಂಬಡಿಕೆ (ಎಂಒಯು) ನಡೆಯಲಿದೆ ಎಂದು ಮತ್ಸೃಬಂಧು ನಿರ್ದೇಶಕ ಗೋವಿಂದ ಪೂಜಾರಿ ‘ವಿಜಯವಾಣಿ’ ಗೆ ತಿಳಿಸಿದ್ದಾರೆ.

ಪ್ರಸ್ತುತ ಬೆಂಗಳೂರು ಹೆಬ್ಬಾಳದ ಫ್ಯಾಕ್ಟರಿಯಲ್ಲಿ ಚಿಪ್ಸ್ ಮತ್ತು ಮೀನಿನ ಮೌಲ್ಯ ವರ್ಧಿತ ಉತ್ಪನ್ನಗಳು ಉತ್ಪಾದನೆಯಾಗುತ್ತಿವೆ. ಡಿಸೆಂಬರ್ ಬಳಿಕ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಫ್ಯಾಕ್ಟರಿಯಲ್ಲಿಯೂ ಉತ್ಪಾದನೆಯಾಗಲಿವೆ.

ದಾಸ್ತಾನುಗಾರರ ಆಯ್ಕೆ: ಚಿಪ್ಸ್ ಸಹಿತ ಮೀನಿನ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಗೆ ವಿತರಿಸಲು ಜಿಲ್ಲಾ ಮಟ್ಟದ ದಾಸ್ತಾನುಗಾರರ ಆಯ್ಕೆ ನಡೆಸಲು ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ನೇಮಕಗೊಳ್ಳುವ ದಾಸ್ತಾನುಗಾರರು ತಮ್ಮ ಆಧೀನದ ವಿತರಕರ ಮೂಲಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದ್ದಾರೆ. ಉಡುಪಿ ಮಾರುಕಟ್ಟೆಗೆ ಈಗಾಗಲೇ ಬಿಡುಗಡೆಯಾಗಿರುವ ಉತ್ಪನ್ನಗಳಿಗೆ ಗ್ರಾಹಕರಿಂದ ದೊರೆತ ಸ್ಪಂದನೆಯಿಂದ ಪ್ರೇರಿತರಾದ ತಂಡ ತಮ್ಮ ಉತ್ಪನ್ನಗಳ ಮಾರಾಟ ಕ್ಷೇತ್ರವನ್ನು ವಿಸ್ತರಿಸಲು ಉದ್ದೇಶಿಸಿದೆ.

ಏನಿದು ಮೀನು ಚಿಪ್ಸ್: ಮೀನಿನಿಂದ ತಯಾರಿಸಲಾದ ಚಿಪ್ಸ್‌ಗಳಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳಿವೆ. ಮೀನಿನ ಫ್ಯಾಟ್ ಅಂಶಗಳನ್ನು ತೆಗೆದು, ಅದರಲ್ಲಿರುವ ನೈಜ ಪೌಷ್ಟಿಕಾಂಶ ಉಳಿಸಿಕೊಂಡು ಚಿಪ್ಸ್ ಸಿದ್ಧಪಡಿಸಲಾಗಿದೆ. ಒಮೆಗಾ-3 ಕೊಬ್ಬು, ವಿಟಮಿನ್ ಡಿ ಮತ್ತು ಬಿ2 ಕೂಡ ಇರಲಿದೆ. ಸಾಮಾನ್ಯ ಚಿಪ್ಸ್‌ಗಳಂತೆ ಇದು ಜಂಕ್ ಫುಡ್ ಅಲ್ಲ. ಇದೊಂದು ಪೌಷ್ಟಿಕಾಂಶಯುಕ್ತ ಆಹಾರ. ಚಿಪ್ಸ್‌ನಲ್ಲಿ ಮೀನಿನ ವಾಸನೆ ಇರುವುದಿಲ್ಲ. ಪಾಲಕ್, ಕ್ಯಾರೆಟ್, ಟೊಮೊಟೊ, ಮಸಾಲ ಎಂಬ ನಾಲ್ಕು ಪ್ಲೇವರ್‌ಗಳಲ್ಲಿ ಇದು ಲಭ್ಯವಾಗಲಿದೆ. ಕೆಎಫ್ಡಿಸಿಯ ಎಲ್ಲ ಮಳಿಗೆಗಳಲ್ಲೂ ಹಾಗೂ ಮತ್ಸ್ಯದರ್ಶಿನಿಗಳಲ್ಲಿ ಚಿಪ್ಸ್‌ಗಳು ಲಭ್ಯ. ಚಿಪ್ಸ್ ಶೇ.80 ಮೀನು, ಶೇ.10 ತರಕಾರಿ ಮತ್ತು ಶೇ.10 ಇತರ ವಸ್ತುಗಳನ್ನು ಒಳಗೊಂಡಿರುತ್ತದೆ. 40 ರೂ ಹಾಗೂ 20 ರೂ ಪ್ಯಾಕೆಟ್‌ಗಳಲ್ಲಿ ಲಭ್ಯ.

ಇತರ ಉತ್ಪನ್ನ: ಚಿಪ್ಸ್ ಜೊತೆಗೆ ಫಿಶ್ ಕರಿ, ಫಿಶ್ ಬಿರಿಯಾನಿ, ಚಿಕನ್ ಮಸಾಲಗಳೂ ಬಿಡುಗಡೆಯಾಗಿವೆ. ಮಾರುಕಟ್ಟೆಯಲ್ಲಿರುವ ಇತರ ಮಸಾಲೆಗಳು ಪೌಡರ್ ರೂಪದಲ್ಲಿದ್ದರೆ ಇಲ್ಲಿ ದೊರೆಯುವ ಮಸಾಲೆಗಳು ನೀರಿನ ಅಂಶವನ್ನು ಒಳಗೊಂಡಿರುತ್ತದೆ. ಬಳಸುವವರು ತಮಗೆ ಬೇಕಾಗಿರುವ ಮೀನುಗಳನ್ನು ಸೇರಿಸಬಹುದು ಎನ್ನುತ್ತಾರೆ ಉತ್ಪಾದಕರು.

ರೈಲು ಮತ್ತು ರೈಲು ನಿಲ್ದಾಣಗಳಲ್ಲಿ ಮೀನಿನ ಚಿಪ್ಸ್‌ಗಳ ಮಾರಾಟ ಸಂಬಂಧಿಸಿ ರೈಲ್ವೆ ಮತ್ತು ಕೆಎಫ್‌ಡಿಸಿ ನಡುವೆ ಶೀಘ್ರದಲ್ಲೇ ಒಪ್ಪಂದ ಮಾಡಿಕೊಳ್ಳಲಾಗುವುದು. ಮೀನಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ನಿಟ್ಟಿನಲ್ಲಿ ಉತ್ತಮ ಪ್ರಯತ್ನಗಳು ನಡೆಯುತ್ತಿದ್ದು, ಮೀನಿನ ಚಿಪ್ಸ್‌ಗಳಿಗೆ ಗ್ರಾಹಕರ ಕಡೆಯಿಂದ ಅತ್ಯುತ್ತಮ ಸ್ಪಂದನೆ ದೊರೆತಿದೆ. ನಿತಿನ್ ಕುಮಾರ್ ಅಧ್ಯಕ್ಷರು, ಕೆಎಫ್‌ಡಿಸಿ