ಜಿಲ್ಲೆ

ಹಾರಂಗಿಯಲ್ಲಿ ಮೀನಿನ ಕ್ಯಾಂಟೀನ್ ಆರಂಭ

ಸುನಿಲ್ ಪೊನ್ನೇಟಿ

ಕುಶಾಲನಗರ:

ಹಾರಂಗಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಹಿಡಿದ ತಾಜಾ ಮೀನಿನ ಖಾದ್ಯವನ್ನು ಸುಂದರ ಪ್ರಾಕೃತಿಕ ತಾಣದಲ್ಲಿ ಸವಿಯಬೇಕೇ ? ಹಾಗಾದರೆ ಹಾರಂಗಿ ಡ್ಯಾಂ ಬಳಿ ಆರಂಭ ಆಗಿರುವ ಮೀನಿನ ಕ್ಯಾಂಟೀನ್ ಮತ್ತು ಮತ್ಸ್ಯ ವಾಹಿನಿ ಇ ರಿಕ್ಷಾ ಮೊಬೈಲ್ ಕ್ಯಾಂಟೀನ್‌ಗೆ ಒಮ್ಮೆ ಭೇಟಿ ನೀಡಬಹುದು.

ಹೌದು, ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ಪ್ರವಾಸಿತಾಣಗಳಲ್ಲಿ ಮೀನಿನ ಕ್ಯಾಂಟೀನ್ ಆರಂಭಿಸುವ ಶಾಸಕ ಡಾ. ಮಂತರ್ ಗೌಡ ಚಿಂತನೆಯ ಮುಂದುವರಿದ ಭಾಗವಾಗಿ ಬುಧವಾರದಿಂದ ಹಾರಂಗಿಯಲ್ಲೂ ಮೀನಿನ ಕ್ಯಾಂಟೀನ್ ಮತ್ತು ಮತ್ಸ್ಯ ವಾಹಿನಿ ಇ ರಿಕ್ಷಾ ಮೊಬೈಲ್ ಕ್ಯಾಂಟೀನ್ ಶುರುವಾಗಿದೆ.

ಕಾವೇರಿ ಮೀನುಗಾರರ ಸಹಕಾರ ಸಂಘದ ವತಿಯಿಂದ ಈ ಮೀನಿನ ಕ್ಯಾಂಟೀನ್ ಮತ್ತು ಮತ್ಸ್ಯ ವಾಹಿನಿ ಇ ರಿಕ್ಷಾ ಮೊಬೈಲ್ ಕ್ಯಾಂಟೀನ್ ತೆರೆಯಲಾಗಿದ್ದು, ಹಾರಂಗಿ ಜಲಾಶಯದಲ್ಲಿ ಹಿಡಿದ ತಾಜಾ ಮೀನಿನ ಖಾದ್ಯಗಳನ್ನು ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಕೈಗೆಟಕುವ ದರದಲ್ಲಿ ಶುಚಿ ರುಚಿಯಾಗಿ ಒದಗಿಸಲಾಗುತ್ತಿದೆ.

ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಮತ್ತು ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಸಚಿನ್ ಈ ಕ್ಯಾಂಟೀನ್ ವ್ಯವಸ್ಥೆಗೆ ಚಾಲನೆ ನೀಡಿದರು. ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮತ್ತು ಸಚಿನ್, ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಸಂತೋಷ್, ಕಾವೇರಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್ ಮತ್ತು ಸಂಘದ ಸದಸ್ಯರು ಈ ವೇಳೆ ಇದ್ದರು.

ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಫಾಲ್ಸ್, ಕುಶಾಲನಗರ ತಾಲೂಕಿನ ಚಿಕ್ಲಿಹೊಳೆ ಹಾಗೂ ಬಸವನಹಳ್ಳಿಯಲ್ಲಿ ಈಗಾಗಲೇ ಮತ್ಸö್ಯವಾಹಿನಿ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿದೆ.