ಮೈಸೂರು: ಕರ್ನಾಟಕ ಯೋಗ ಶಿಕ್ಷಕರ ಒಕ್ಕೂಟ ವತಿಯಿಂದ ನಗರದ ಕಲಾಮಂದಿರದಲ್ಲಿ ಜೂ.22, 23 ರಾಜ್ಯ ಮಟ್ಟದ ಪ್ರಥಮ ಯೋಗ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಕಾರ್ಯಾಧ್ಯಕ್ಷ ಟಿ. ಜಲೇಂದ್ರ ಕುಮಾರ್ ಹೇಳಿದರು.
ಸಮ್ಮೇಳನಾಧ್ಯಕ್ಷರಾಗಿ ಯೋಗಗುರು ಡಾ.ಕೆ.ಎಲ್. ಶಂಕರನಾರಾಯಣ ಜೋಯಿಸ್ ಅವರನ್ನು ಅಯ್ಕೆ ಮಾಡಲಾಗಿದೆ. ಜೂ.22 ರಂದು ಬೆಳಗ್ಗೆ 10ಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಸಮ್ಮೇಳನದಲ್ಲಿ ಯೋಗಕ್ಕೆ ಸಂಬಂಧಿಸಿದ ವಿವಿಧ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಡಾ.ಕೆ.ಎಲ್. ಶಂಕರನಾರಾಯಣ ಜೋಯಿಸ್ ರಚಿಸಿರುವ ‘ಮೈಸೂರು ಯೋಗ ಪರಂಪರೆ’ ಕೃತಿಯನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಡುಗಡೆ ಮಾಡುವರು. ‘ಯೋಗಸಿರಿ’ ಸ್ಮರಣ ಸಂಚಿಕೆಯನ್ನು ಬೆಂಗಳೂರಿನ ಪತಂಜಲಿ ಯೋಗಾಶ್ರಮದ ಅಧ್ಯಕ್ಷ ಪ್ರಕಾಶ್ ಗುರೂಜಿ ಬಿಡುಗಡೆ ಮಾಡುವರು. ಅತಿಥಿಗಳಾಗಿ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಮುಕ್ತಿದಾನಂದ ಜೀ ಮಹಾರಾಜ್, ಶ್ರೀ ಅವಧೂತ ದತ್ತ ಪೀಠದ ಶ್ರೀ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಜೂ.23 ರಂದು ಸಂಜೆ 5ಕ್ಕೆ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮೈಸೂರು ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಎಚ್.ವಿ. ರಾಜೀವ್, ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ, ಖಜಾಂಚಿ ಅರವಿಂದ ಶರ್ಮ, ಕಾರ್ಯದರ್ಶಿ ಡಾ.ಬಿ.ಪಿ. ಮೂರ್ತಿ, ಪ್ರಧಾನ ಸಂಚಾಲಕ ಎನ್. ಅನಂತ ಇದ್ದರು.