ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಪ್ರತಿಯೊಬ್ಬರೂ ಕನ್ನಡವನ್ನು ಉಳಿಸಿ, ಬೆಳೆಸುವ ಕೆಲಸ ಮಾಡಬೇಕು. ನೀವು ಎಲ್ಲಿಂದಲೋ ಬಂದು ಕನ್ನಡ ನಾಡಿನಲ್ಲಿ ನೆಲೆಸಿದ ಮೇಲೆ ಕನ್ನಡಕ್ಕೆ ಪ್ರಾಶಸ್ತ್ಯ ನೀಡಿ, ಮಾತೃಭಾಷೆ ಯಾವುದೇ ಇರಲಿ, ಕಲಿತು ಮಾತನಾಡಬೇಕು ಎಂದು ಆಹಾರ ಮತ್ತು ನಾಗರೀಕ ಸರಬರಾಜು, ಗ್ರಾಹಕ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ತಾಲೂಕಿನಲ್ಲಿ ಬ್ರಿಗೇಡ್ ಆರ್ಚರ್ಡ್ಸ್ ಕನ್ನಡಿಗರ ಸಂಘ ಪರಿವಾರ ಪ್ರಥಮ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಅವರು ಕನ್ನಡದ ಬಗ್ಗೆ ಬಹಳ ವಿಸ್ತಾರವಾಗಿ ತಿಳಿಸಿದ್ದಾರೆ ಅವರಿಗೆ ಧನ್ಯವಾದಗಳು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಪ್ರಸ್ತಾಪ ಮಾಡಿದ್ದರು. ಆದು ಆಗಿಯೇ ತೀರಲಿದೆ. ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿರುವ ಬ್ರಿಗೇಡ್ ಆರ್ಚರ್ಡ್ಸ್ ಕನ್ನಡ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಹೊಸಕೋಟೆ, ದೇವನಹಳ್ಳಿ ನಮಗೆ ಬೇರೆಯಲ್ಲ. ನಮ್ಮನ್ನು ಕರೆಸಿ, ಭಾಗವಹಿಸಲು ಕೋರಿದ್ದರು. ಅವರ ಮಾತಿಗೆ ಮಣಿದು, ಭಾಗವಹಿಸಿದ್ದೇನೆ. ನನಗೆ ಬಹಳ ಸಂತಸವಾಗಿದೆ. ಕನ್ನಡ ಎಂದರೆ ರೋಮಾಂಚನವಾಗುವುದು ನಮ್ಮ ಭಾಷೆಗೆ ಮಿಗಿಲಾದದ್ದು ಬೇರೆ ಇಲ್ಲ ಎಂದರು.
ಕನ್ನಡ ಅಭಿಮಾನಿಗಳ ಸಂಘದ ಸಂಚಾಲಕ ರಾಜೇಶ್ ಮಾತನಾಡಿ, ಕಾರ್ಯಕ್ರಮಕ್ಕೆ ಉತ್ತಮ ಸ್ಪಂಧನೆ ನೀಡಿರುವುದು ನಿಜಕ್ಕೂ ಮೆಚ್ಚುವ ವಿಷಯ. ಹೆಚ್ಚಾಗಿ ಕನ್ನಡಿಗರಿದ್ದರೂ ಹೊರನಾಡಿನಿಂದ ಬಂದು ಇಲ್ಲಿ ನೆಲೆಸಿರುವ ಎಲ್ಲ ಭಾಷಿಗರೂ ಇಂತಹ ಅದ್ದೂರಿ ಕಾರ್ಯಕ್ರಮಕ್ಕೆ ಮೆರುಗು ತಂದು, ತಮ್ಮ ಕನ್ನಡಾಭಿಮಾನ ಮೆರೆದಿದ್ದಾರೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಅದರಲ್ಲೂ ಹಿರಿಯ ಮಹಿಳೆಯರು ನೃತ್ಯ ಮಾಡಿ, ನೆರೆದಿದ್ದ ಕನ್ನಡ ಮನಸ್ಸುಗಳಿಗೆ ಮುದ ನೀಡಿ ರಂಜಿಸಿದರು. ಇದರ ಜತೆಯಲ್ಲಿ ಸಾಂಸ್ಕೃತಿಕ ಕಲಾ ತಂಡಗಳಾದ, ಯಕ್ಷಗಾನ, ಹುಲಿವೇಷ, ಡೊಳ್ಳುಕುಣಿತ ಸೇರಿ ಎಲ್ಲ ತಂಡಗಳು ಮನರಂಜನೆ ನೀಡಿದರು.
ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಸಿ.ಜಗನ್ನಾಥ್, ಮಾಜಿ ಜಿಪಂ ಅಧ್ಯಕ್ಷ ಬಿ.ರಾಜಣ್ಣ, ಎಂ.ಲೋಕೇಶ್, ಎಂ.ನಾರಾಯಣಸ್ವಾಮಿ, ಸತೀಶ್‌ಗೌಡ, ಅನಂತಕುಮಾರಿ ಚಿನ್ನಪ್ಪ, ರಾಧಮ್ಮ, ಮಂಜುಳಾ, ಮಾದವಿ, ಎಡಿಸಿ ಎಚ್.ಅಮರೀಶ್, ಪ್ರಶಾಂತ್, ಡಾ.ನವೀನ್, ರಾಜೇಶ್, ನಾರಾಯಣ್, ನಾಗರಾಜ್, ಮಾಲಾ, ವನಿತಾ ಇದ್ದರು.