ಜಿಲ್ಲೆ

ಮಡಿಕೇರಿಯಲ್ಲಿ ಮೊದಲ ವರ್ಷದ ಕಾಫಿ ದಸರಾ ಸಂಭ್ರಮ

ಸುನಿಲ್ ಪೊನ್ನೇಟಿ

ಮಡಿಕೇರಿ:

ರಾಜ್ಯಕ್ಕೆ ನೀರು ಕೊಡುವ ಕೊಡಗಿನ ಸಮಗ್ರ ಅಭಿವೃದ್ಧಿ ಸಂಬAಧ ತೋಟಗಾರಿಕೆ ಮತ್ತು ಆರೋಗ್ಯ ಸಚಿವರನ್ನು ಒಳಗೊಂಡು ಬೆಂಗಳೂರಿನಲ್ಲಿ ಸದ್ಯದಲ್ಲೇ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು. ದಸರಾ ಹಿನ್ನೆಲೆಯಲ್ಲಿ ಮಡಿಕೇರಿ ನಗರ ದಸರಾ ಸಮಿತಿ ವತಿಯಿಂದ ಭಾನುವಾರ ಇಲ್ಲಿನ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಮೊದಲ ವರ್ಷದ ಕಾಫಿ ದಸರಾ ಉದ್ಘಾಟಿಸಿ ಮಾತನಾಡಿದರು.

ಕೊಡಗಿನ ಯೋಧ ಪರಂಪರೆ, ಸಾಂಸ್ಕೃತಿಕ ಹಿರಿಮೆ, ಶಿಸ್ತಿನ ಜೀವನಕ್ಕಾಗಿ ದೇಶವೇ ಹೆಮ್ಮೆಪಡುತ್ತದೆ. ಇಂಥ ಶಿಸ್ತು ಎಲ್ಲಾ ಕಡೆಯೂ ಕಂಡುಬರುವAತಾಗಬೇಕು. ಮೈಸೂರು ದಸರಾ ಮಾದರಿಯಲ್ಲಿ ಐತಿಹಾಸಿಕ ಹಿನ್ನೆಲೆ ಇರುವ ಕೊಡಗಿನ ದಸರಾ ಪರಂಪರೆ ವಿಜೃಂಭಣೆಯಿAದ ನಡೆಯುವಂತಾಗಬೇಕು. ಮುಂದಿನ ವರ್ಷದಿಂದ ಇನ್ನೂ ಹೆಚ್ಚಿನ ಸಂಭ್ರಮ ಕಾಣಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮತ್ತು ತಮ್ಮ ಇಲಾಖೆಯಿಂದ ಎಲ್ಲಾ ಸಹಕಾರ ಕೊಡಲಾಗುವುದು. ಕಾಫಿ ಬೆಳೆಗಾರರ ಆತಂಕಕ್ಕೆ ಕಾರಣವಾಗಿರುವ ಕಾಫಿಯನ್ನು ಕಾಡುವ ರೋಗಗಳ ಬಗ್ಗೆ ಸಂಶೋಧನೆಗೆ ಕೃಷಿ ಇಲಾಖೆಯಿಂದ ಒತ್ತು ಕೊಡಲಾಗುವುದು. ಕೊಡಗಿನಲ್ಲಿ ಮಳೆ ಜೋರಾದರೆ ಜಿಲ್ಲೆಗೆ ಸಂಕಷ್ಟ ಕಾಡುತ್ತದೆ. ಇಷ್ಟಾದರೂ ಕುಡಿಯಲು ಮತ್ತು ಕೃಷಿಗೆ ರಾಜ್ಯಕ್ಕೆ ಇಲ್ಲಿಂದಲೇ ನೀರು ಬರುತ್ತದೆ. ಈ ಒಂದು ಭಾವನಾತ್ಮಕ ಸಂಬAಧದ ಮೇಲೆ ಕೊಡಗಿನಲ್ಲಿ ತೊಂದರೆಗೆ ಒಳಗಾದವರಿಗೆ ನೆರವು ನೀಡುವುದು ಸರ್ಕಾರದ ಕರ್ತವ್ಯವಾಗಿದೆ.

ಕಾಶಿಗೆ ತೆರಳಿ ಗಂಗಾ ಆರತಿ ಬಗ್ಗೆ ಅಧ್ಯಯನ ನಡೆಸಿ ಬರಲಾಗಿದೆ. ರಾಜ್ಯದಲ್ಲೂ ಇದೇ ಮಾದರಿಯಲ್ಲಿ ಕಾವೇರಿ ಆರತಿ ನಡೆಸಲಾಗುವುದು. ಯಾವುದಾದರೂ ಒಂದು ಸಂದರ್ಭದಲ್ಲಿ ಭಾಗಮಂಡಲದಲ್ಲೂ ಕಾವೇರಿ ಆರತಿ ನಡೆಸುವ ಚಿಂತನೆ ಇದ್ದು ಈ ಸಂಬAಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆ ಚರ್ಚಿಲಾಗಿದೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆಗಳ ರಕ್ಷಣೆಗೋಸ್ಕರ ಕೃಷಿ ಇಲಾಖೆಯಿಂದ ರಾಜ್ಯದ ಎಲ್ಲಾ ತಾಲೂಕುಗಳಲ್ಲೂ ಕೃಷಿ ಹೊಂಡಗಳನ್ನು ತೆಗೆಸಲಾಗುತ್ತಿದೆ. ಕೊಡಗಿನಲ್ಲಿ 224 ಕೃಷಿ ಹೊಂಡಗಳ ಗುರಿ ನಿಗದಿಪಡಿಸಲಾಗಿದೆ. ಅಗತ್ಯ ಬಿದ್ದರೆ ಇದಕ್ಕಿಂತಲೂ ಹೆಚ್ಚಿನ ಕೃಷಿ ಹೊಂಡ ನಿರ್ಮಿಸಲಾಗುವುದು ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಆರ್. ದಿನೇಶ್ ಗುಂಡೂರಾವ್ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗೆ ಅನುಗುಣವಾಗಿ ಮುಂದೆ ಸಾಗುವುದು ಇಂದಿನ ಅಗತ್ಯವಾಗಿದೆ. ಆಧುನಿಕತೆಯೊಂದಿಗೆ ನಮ್ಮ ಸಂಸ್ಕೃತಿ ಪರಂಪರೆಯನ್ನೂ ಉಳಿಸಿಕೊಂಡು ಹೋಗಬೇಕು. ಇತ್ತೀಚಿನ ವರ್ಷಗಳಲ್ಲಿ ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಹಾಗೆಂದು ಪ್ರವಾಸೋದ್ಯಮ ನಿಲ್ಲಿಸಲು ಆಗುವುದಿಲ್ಲ. ಆದರೆ ನಿಯಂತ್ರಣ ಸಾಧಿಸಬಹುದು. ಸಾಮರಸ್ಯ, ಸಮತೋಲನ ಸಾಧಿಸಿಕೊಂಡು ಅಭಿವೃದ್ಧಿ ಮಾಡುವುದು ಕೊಡಗಿನ ಮುಂದಿರುವ ದೊಡ್ಡ ಸವಾಲಾಗಿದೆ. ಕಾಫಿ ಕುಡಿಯುವವರ ಸಂಖ್ಯೆ ಹೆಚ್ಚಾಗಬೇಕು. ಇದರಿಂದ ಬೆಳೆಗಾರರು ಮತ್ತು ದೇಶಕ್ಕೆ ಆರ್ಥಿಕವಾಗಿಯೂ ಅನುಕೂಲ ಆಗಬಹುದು. ಕಾಫಿ ಬೆಳೆಗಾರರು ಮತ್ತು ಮಾರುಕಟ್ಟೆಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸಂಘಟಿತ ಯೋಜನೆ ರೂಪಿಸುವ ಅಗತ್ಯವಿದೆ. ಮುಂದಿನ ಬಜೆಟ್‌ನಲ್ಲಿ ಆರೋಗ್ಯ ಇಲಾಖೆ ಮೂಲಕ ಕೊಡಗಿಗೆ ವಿಶೇಷ ಯೋಜನೆ ಪ್ರಕಟಿಸಲಾಗುವುದು ಎಂದರು.

ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಮಾತನಾಡಿ ಮಣ್ಣಿನಿಂದ ಮಾರುಕಟ್ಟೆ ತನಕ ಕಾಫಿ ಎನ್ನುವುದು ಕಾಫಿ ಮಂಡಳಿ ಪರಿಕಲ್ಪನೆ ಆಗಿದೆ. ಇದಕ್ಕೆ ಅನುಗುಣವಾಗಿ ಕಾಫಿ ಉತ್ಪಾದನೆÀ ದುಪ್ಪಟ್ಟು ಮಾಡಲು ಯೋಜನೆ ಈಗಾಗಲೇ ಜಾರಿಯಲ್ಲಿದೆ. ವೈಜ್ಞಾನಿಕ ಪದ್ಧತಿ ಮೂಲಕ ಕಾಫಿ ಬೆಳೆಯಲು ಬೆಳೆಗಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಬಗ್ಗೆ ಮಂಡಳಿಯಿAದ ತರಬೇತಿಯನ್ನೂ ನೀಡಲಾಗುತ್ತಿದೆ. ಕಾಫಿಯಲ್ಲಿ ಸವಾಲು ಇದೆ, ಅವಕಾಶವೂ ಇದೆ. ಇದನ್ನು ಬಳಸಿಕೊಂಡು ಕಾಫಿ ಬ್ರ‍್ಯಾಂಡ್ ಮಾಡುವ ಮೂಲಕ ಸ್ಟಾರ್ಟಪ್‌ಗಳನ್ನು ಸ್ಥಾಪಿಸಲು ಪ್ರೋತ್ಸಾಹ ಕೊಡಬೇಕು. ಕಾಫಿಯ ಆಂತರಿಕ ಬಳಕೆ ಹೆಚ್ಚಾಗಬೇಕು. ಕಾಫಿ ಉತ್ಪಾದನಾ ವೆಚ್ಚ ಕಡಿಮೆ ಮಾಡುವುದಕ್ಕೆ ಸಂಬAಧಿಸಿದAತೆ ಪ್ರಯೋಗಗಳು ನಡೆದಿದೆ. ಭಾರತೀಯ ರೋಬಸ್ಟಾ ಕಾಫಿ ಉತ್ಕೃಷ್ಟ ಗುಣಮಟ್ಟ ಹೊಂದಿದ್ದು, ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿ ಆಗಬಾರದು. ಬೆಳೆಗಾರರ ಹಿತದೃಷ್ಟಿಯಿಂದ ಹೊಸ ಚಿಂತನೆಗಳೊAದಿಗೆ ಕಾಫಿ ಮಂಡಳಿ ಕಾರ್ಯೋನ್ಮುಖವಾಗಿದ್ದು, ಬೆಳೆಗಾರರ ನೆರವಿಗೆ ಸದಾ ಸಿದ್ಧವಿದೆ. ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಕಾಫಿ ಮಂಡಳಿಗೆ ಸಿಕ್ಕಿರುವ ಅನುದಾನದ ಪೈಕಿ 19 ಕೋಟಿ ರೂ. ಕೊಡಗಿನ ಬೆಳೆಗಾರರಿಗೆ ಸಬ್ಸಿಡಿ ರೂಪದಲ್ಲಿ ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಮಾನವ - ಕಾಡುಪ್ರಾಣಿ ಸಂಘರ್ಷ ಪರಿಹರಿಸಲು ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಒತ್ತುವರಿ ಕಾಫಿ ತೋಟ ಗುತ್ತಿಗೆಗೆ ಕೊಡಬೇಕು ಎಂದು ಇದೇ ವೇಳೆ ಮನವಿ ಮಾಡಿದರು.

ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ ಕಾಫಿ ಬೆಳೆಗಾರರಿಗೆ ಈಗ ಬೆಲೆ ಸಿಗುತ್ತಿದೆ. ಆದರೆ ಬೆಳೆ ಇಲ್ಲ. ಕಾಫಿ ಉದ್ಯಮ ಸದೃಢವಾಗಬೇಕಿದೆ ಎಂದರು. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಫಿಗೆ ಹೆಚ್ಚಿನ ಪ್ರೋತ್ಸಾಹ ಕೊಡಬೇಕು. ಕಾಫಿ ದಸರಾ ಇನ್ನು ಮುಂದೆಯೂ ಪ್ರತಿ ವರ್ಷ ನಡೆಯುವಂತಾಗಬೇಕು. ದಸರಾಕ್ಕೆ ಅನುದಾನ ತರುವುದು ದೊಡ್ಡದಲ್ಲ. ಇದರ ಸದ್ವಿನಿಯೋಗ ಆಗಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿದರು. ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ರಾಜೀವ್, ಕೊಡಗು ಪ್ಲಾಂರ‍್ಸ್ ಅಸೋಸಿಯೇಷನ್ ಅಧ್ಯಕ್ಷ ನಂದ ಬೆಳ್ಯಪ್ಪ, ಮಹಿಳಾ ಕಾಫಿ ಜಾಗೃತಿ ಸಂಘದ ಅಧ್ಯಕ್ಷೆ ಅನಿತಾ ನಂದ, ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಉಪಾಸಿ ಮಾಜಿ ಅಧ್ಯಕ್ಷ ವಿನೋದ್ ಶಿವಪ್ಪ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಮಡಿಕೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ. ಮತ್ತಿತರರು ಇದ್ದರು.