ಪಿಂಚಣಿದಾರ ಕಾರ್ಮಿಕರ ಪ್ರಥಮ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಕರ್ನಾಟಕ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ರವಿ ಡಿ. ಚನ್ನಣ್ಣನವರ್ ಅವರು ಮಾತನಾಡಿದರು. ನಾಜಿಯಾ ಸುಲ್ತಾನ, ಕೆ. ಮಹಂತೇಶ್, ಬಾಲಕೃಷ್ಣ ಶೆಟ್ಟಿ ಇದ್ದರು.
- ಪ್ರತಿ ಜಿಲ್ಲೆಗಳಲ್ಲಿ ಕಾರ್ಮಿಕರ ಜಾಗೃತಿ ಸಮಾವೇಶ
- ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಸಿಇಒ ರವಿ ಡಿ. ಚನ್ನಣ್ಣನವರ್ ಹೇಳಿಕೆ
ಮಂಗಳೂರು: ನೌಕರ ವರ್ಗ, ಪಿಂಚಣಿದಾರರ ಹಿತಕ್ಕಾಗಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ವತಿಯಿಂದ ಆಗಸ್ಟ್ ಮೊದಲ ವಾರದಿಂದ ದ.ಕ. ಸೇರಿದಂತೆ ಪ್ರತಿ ಜಿಲ್ಲೆಗಳಲ್ಲಿ ಜಾಗೃತಿ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ರವಿ ಡಿ. ಚನ್ನಣ್ಣನವರ್ ಅವರು ಹೇಳಿದರು.
ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಡಬ್ಲ್ಯೂಎಫ್‌ಐ) ಸಹಯೋಗದಲ್ಲಿ ಡಾನ್ ಬಾಸ್ಕೋ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಪಿಂಚಣಿದಾರ ಕಾರ್ಮಿಕರ ಪ್ರಥಮ ರಾಜ್ಯಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೋಂದಣಿ ಅಭಿಯಾನ
ಜಿಲ್ಲೆಗಳಿಗೆ ಭೇಟಿ ನೀಡುವ ವೇಳೆ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಅವರ ಕುಂದುಕೊರತೆಗಳನ್ನು ಆಲಿಸಲಾಗುವುದು. ಕಾರ್ಮಿಕರ ಹಿತಕ್ಕಾಗಿ ಸಂಘಟನೆಗಳು ಬದ್ಧತೆಯಿಂದ ಕೆಲಸ ಮಾಡಬೇಕು. ನೋಂದಣಿ ಅಭಿಯಾನಕ್ಕೂ ಸಂಘಟನೆಗಳು ಸಹಕರಿಸಬೇಕು. ಕಾರ್ಮಿಕರ ನೋಂದಣಿಗಾಗಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಆಧಾರ್ ಲಿಂಕ್ ಆದ ಮೊಬೈಲ್ ಸಂಖ್ಯೆ ಇದ್ದರೆ ಸಾಕು ಎಂದರು.
ಎಲ್ಲಾ ಮಕ್ಕಳಿಗೂ ವಿದ್ಯಾರ್ಥಿ ವೇತನ
ಕಾರ್ಮಿಕರ ಮಕ್ಕಳಿಗೂ ವಿದ್ಯಾರ್ಥಿ ವೇತನ ಸಹಿತ ಹಲವಾರು ಸೌಲಭ್ಯಗಳಿವೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ನೋಂದಾಯಿತ ಕಾರ್ಮಿಕರ ಕೇವಲ ಇಬ್ಬರು ಮಕ್ಕಳಿಗೆ ಮಾತ್ರ ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ಈ ಮಿತಿಯನ್ನು ತೆಗೆದು ಹಾಕಲು ಮಂಡಳಿ ನಿರ್ಧರಿಸಿದೆ. ವಿದ್ಯಾರ್ಥಿ ವೇತನವನ್ನು ಅರ್ಹ ಎಲ್ಲಾ ಮಕ್ಕಳಿಗೂ ವಿಸ್ತರಿಸಲಾಗುವುದು ಎಂದು ಚನ್ನಣ್ಣನವರ್ ಹೇಳಿದರು.
ಪಿಂಚಣಿ ಹೆಚ್ಚಳಕ್ಕೆ ಪ್ರಸ್ತಾವನೆ
ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರ ಮಾಸಿಕ ಪಿಂಚಣಿಯನ್ನು ಈ ಹಿಂದೆ 1 ಸಾವಿರದಿಂದ 3 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿತ್ತು. 3 ರಿಂದ 5 ಸಾವಿರ ರೂ.ಗೆ ಹೆಚ್ಚಿಸಲು ಕಾರ್ಮಿಕ ಸಂಘಟನೆಗಳ ಬೇಡಿಕೆ ಇದೆ. ಈ ಬಗ್ಗೆಯೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ರವಿ ಚನ್ನಣ್ಣನವರ್ ಹೇಳಿದರು.
ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ, ನಿರ್ಮಾಣ ಕಾರ್ಮಿಕರ ಫೆಡರೇಶನ್ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಂತೇಶ್, ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಲೀಲಾವತಿ, ಯಾದವ ಶೆಟ್ಟಿ, ವಸಂತ ಆಚಾರಿ, ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು.
"ಕಾರ್ಮಿಕರ ಮಕ್ಕಳು ವಿದ್ಯಾವಂತರಾಗಬೇಕು. ಅವರಿಂದ ಕಾರ್ಮಿಕರ ಬದುಕು ಹಸನಾಗಬೇಕಿದೆ. ಅವರು ಉನ್ನತ ಮಟ್ಟದ ಅಧಿಕಾರಿಗಳು, ಎಂಜಿನಿಯರ್, ಡಾಕ್ಟರ್ ಆಗಬೇಕು. ಈ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಅಗತ್ಯವಾಗಿ ಸಿಗಬೇಕಿದೆ. ಪರೀಕ್ಷಾ ತರಬೇತಿ ವೆಚ್ಚವನ್ನು ಮಂಡಳಿಯೇ ಭರಿಸುವಂತಹ ಯೋಜನೆಯನ್ನು ಅನುಷ್ಠಾನಗೊಳಿಸಲು ಚಿಂತನೆ ನಡೆಸಲಾಗಿದೆ. ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ."
— ರವಿ ಡಿ. ಚನ್ನಣ್ಣನವರ್, ಸಿಇಒ, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ