ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿ ಹಲವು ದಿನಗಳೇ ಕಳದರೂ ಜಿಲ್ಲೆಯ ಕೊನೇ ಭಾಗದ ಕೆರೆ ಕಟ್ಟೆ ತುಂಬಿಸಲು ನಿರ್ಲಕ್ಷೃ ಮಾಡುತ್ತಿರುವ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತರಾಟೆಗೆ ತೆಗೆದುಕೊಂಡರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸಚಿವ ಸಿಆರ್‌ಎಸ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಥಮ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನರೇಂದ್ರಸ್ವಾಮಿ ಈ ವಿಷಯ ಪ್ರಸ್ತಾಪಿಸಿದರು. ತಮಿಳುನಾಡಿಗೆ ಹೆಚ್ಚಾಗಿ ನೀರು ಹರಿದು ಹೋಗಿದೆ. ಆದರೆ ಮದ್ದೂರು, ಮಳವಳ್ಳಿ ತಾಲೂಕಿನ ಕಡೇ ಭಾಗದ ಕೆರೆಗಳಿಗೆ ನೀರು ತುಂಬಿಸಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷೃ ಸರಿಯಲ್ಲ ಎಂದರು. ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ, ಇಬ್ಬರು ಶಾಸಕರೊಂದಿಗೆ ಚರ್ಚೆ ಮಾಡಿ ತ್ವರಿತವಾಗಿ ನೀರು ತುಂಬಿಸುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ನೋಟೀಸ್ ನೀಡಲು ಸೂಚನೆ: ಕೆಡಿಪಿ ಸಭೆಗೆ ಗೈರಾಗಿದ್ದ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಕೆ.ರಘುರಾಂಗೆ ನೋಟೀಸ್ ನೀಡುವಂತೆ ಸಚಿವ ಎನ್.ಚಲುವರಾಯಸ್ವಾಮಿ ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು. ಸಭೆಗೆ ಬರಲು ಸಾಧ್ಯವಾಗಿದ್ದರೆ ಜಿಲ್ಲಾಧಿಕಾರಿ ಅಥವಾ ಹಿರಿಯ ಅಧಿಕಾರಿಗಳಿಗೆ ತಿಳಿಸಬೇಕು. ಮಾಹಿತಿ ನೀಡದೆ ಗೈರಾಗುವುದು ತಪ್ಪು. ಕೆಡಿಪಿ ಸಭೆಗೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಮಾತ್ರವಲ್ಲದೆ ಸರಿಯಾದ ಸಿದ್ದತೆ ಮತ್ತು ಮಾಹಿತಿಯೊಂದಿಗೆ ಬರಬೇಕು. ಇಲ್ಲಿಗೆ ಬಂದು ತಡಕಾಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.
ಸರ್ಕಾರದ ಕಾರ್ಯಕ್ರಮಗಳು ಡಿಸೆಂಬರ್ ಅಂತ್ಯದೊಳಗೆ ಅನುಷ್ಠಾನ ವಾಗಬೇಕು. ಆಸಕ್ತಿ ಹಾಗೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ. ಜಲ ಜೀವನ್ ಮಿಷನ್ ಪೂರ್ಣಗೊಳಿಸಲು ಡಿಸೆಂಬರ್ ಮಾಹೆಯವರೆಗೆ ಗಡುವು ನೀಡಲಾಗಿದ್ದು, ಕೆಲಸಗಳನ್ನು ಚುರುಕುಗೊಳಿಸಿ ಪೂರ್ಣಗೊಳಿಸಿ. ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರಿಂದ ಅಧಿಕಾರಿಗಳು ಮಾರ್ಗದರ್ಶನ ಪಡೆದು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಎಂದು ತಿಳಿಸಿದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ಮೈಸೂರು ವಿಭಾಗದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್, ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಕೆ.ಎಂ.ಉದಯ್, ಎಚ್.ಟಿ.ಮಂಜು, ಎಂಎಲ್‌ಸಿ ಕೆ.ವಿವೇಕಾನಂದ, ಮುಡಾ ಅಧ್ಯಕ್ಷ ನಯೀಂ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್‌ಕುಮಾರ್ ಮೀನಾ, ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ. ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಇತರರಿದ್ದರು.
ಲಂಚ ಕೇಳುವ ಅಧಿಕಾರಿಗಳ ವಿರುದ್ಧ ತನಿಖೆ
ಸಾರ್ವಜನಿಕರ ಕೆಲಸ ಮಾಡಿಕೊಡಲು ಅಧಿಕಾರಿಗಳು ಲಂಚ ಕೇಳುತ್ತಿರುವ ಬಗ್ಗೆ ಶಾಸಕ ನರೇಂದ್ರಸ್ವಾಮಿ ಹಾಗೂ ಎಂಎಲ್‌ಸಿ ಕೆ.ವಿವೇಕಾನಂದ ಪ್ರತ್ಯೇಕ ಪ್ರಕರಣವನ್ನು ಸಭೆಯಲ್ಲಿ ತಿಳಿಸಿದರು. ಸಚಿವ ಸಿಆರ್‌ಎಸ್ ಪ್ರತಿಕ್ರಿಯಿಸಿ, ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಡಿಸಿಗೆ ಸೂಚನೆ ನೀಡಿದರು.
ಕೆಲವು ಅಧಿಕಾರಿಗಳ ಹೆಸರನ್ನು ಪ್ರಸ್ತಾಪಿಸಿ ಮಾತನಾಡಿದ ನರೇಂದ್ರಸ್ವಾಮಿ, ಜನರಿಗೆ 50 ಸಾವಿರ ರೂನಿಂದ 1 ಲಕ್ಷ ರೂ.ವರೆಗೆ ನೀಡುವಂತೆ ಅಧಿಕಾರಿಗಳು ಪೀಡಿಸುತ್ತಿದ್ದಾರೆ. ಅವರ ಅಕೌಂಟ್‌ಗೆ ನಾನೇ ಹಣ ಹಾಕಿಸುತ್ತೇನೆ. ಮಳವಳ್ಳಿ ತಾಲೂಕು ಕಚೇರಿ, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಏಜೆಂಟರಿದ್ದಾರೆ. ಅದಕ್ಕೆ ಕಡಿವಾಣ ಹಾಕಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ಸಚಿವ ಎನ್.ಚಲುವರಾಯಸ್ವಾಮಿ, ಇಂತಹ ಬೆಳವಣಿಗೆಯನ್ನು ಸಹಿಸಲಾಗದು. ಕಂದಾಯ ಇಲಾಖೆಯಲ್ಲಿ ಒಂದೇ ಬಾರಿಗೆ ಎಲ್ಲವನ್ನೂ ಬದಲಾವಣೆ ಮಾಡಲಾಗದು. ಹಂತ ಹಂತವಾಗಿ ಬದಲಾವಣೆಯಾಗಬೇಕು. ಆದರೆ, ಭ್ರಷ್ಟಾಚಾರಕ್ಕೆ ಕ್ಷಿಪ್ರ ಕಡಿವಾಣ ಹಾಕಲೇಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಮಳವಳ್ಳಿಯ ಸೈಬರ್ ಸೆಂಟರ್‌ಗಳಲ್ಲಿ ಕುಳಿತು ನಕಲಿ ಭೂದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ. 800 ಎಕರೆ ಸರಕಾರಿ ಭೂಮಿ ಅಕ್ರಮವಾಗಿ ಖಾತೆಯಾಗಿರುವುದು ಬೆಳಕಿಗೆ ಬಂದಿದೆ. ಇದು ಇನ್ನೂ ಹೆಚ್ಚಿನ ಭೂಮಿ ಅಕ್ರಮವಾಗಿ ಖಾತೆಯಾಗಿರುವುದಕ್ಕೆ ಖಾತ್ರಿಯಲ್ಲವೇ?. ರೆವಿನ್ಯೂ ಸ್ಟಾಫ್ ನೆಟ್‌ವರ್ಕ್ ಇದೆ. ಭೂ ಅಕ್ರಮಗಳು ಅವ್ಯವಹಾರವಾಗಿ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು. ಒತ್ತುವರಿ ತೆರವುಗೊಳಿಸಬೇಕು ನರೇಂದ್ರಸ್ವಾಮಿ ಒತ್ತಾಯಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕುಮಾರ, ಅಕ್ರಮ ಖಾತೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ರಾಜ್ಯ ತಂಡವೂ ಬಂದು ಪರಿಶೀಲಿಸಿ ವರದಿ ನೀಡಿದೆ. ಅದರಂತೆ ತಪ್ಪಿತಸ್ಥರ ಅಧಿಕಾರಿಗಳನ್ನು ಅಮಾನಗೊಳಿಸಿ, ಅವರ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಿಸಿ, ನಿರ್ಧಾಕ್ಷಣ್ಯ ಕ್ರಮ ಜರುಗಿಸಲಾಗಿದೆ. ಅಕ್ರಮ ಖಾತೆ ರದ್ದುಪಡಿಸಿ, ಆರ್‌ಟಿಸಿಯಲ್ಲಿ ಸರ್ಕಾರಿ ಜಾಗವೆಂದು ನಮೂದಿಸುವ ಕೆಲಸ ನಡೆಯುತ್ತಿದೆ. ಮುಂದೆ ಯಾವುದೇ ಸಮಸ್ಯೆಯಾಗಬಾರದೆಂದು ಎಸಿ ಕೋರ್ಟ್ ಮೂಲಕವೇ ಕಾನೂನುಬದ್ಧವಾಗಿ ಮಾಡಲಾಗುತ್ತಿದೆ. ಸರ್ಕಾರಿ ಜಾಗ ಎಂದಿದ್ದ ಆರ್‌ಟಿಸಿಗಳ ಜಮೀನು ಒತ್ತುವರಿಯನ್ನು ಮಾತ್ರ ತೆರವುಗೊಳಿಸಬಹುದು. ಒತ್ತುವರಿ ಎಂದು ಗುರುತಿಸಲಾದ, ಖಾತೆಯಾಗಿರುವ ಖಾಸಗಿ ಜಾಗವನ್ನು ತೆರವುಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಕಾನೂನು ಪ್ರಕಾರ ಹೆಜ್ಜೆ ಇಡಲಾಗುತ್ತಿದೆ ಎಂದು ಹೇಳಿದರು.