ಜಿಲ್ಲೆ

ಶಿಕ್ಷಣ, ಸಂಸ್ಕಾರದೊಂದಿಗೆ ಸುಪ್ರಜೆಗಳಾಗಿ...

ಡಾ. ಎ.ಪಿ. ಭಟ್​ ಆಶಯ

ಪಿಪಿಸಿಯಲ್ಲಿ ಪ್ರಥಮ ಪಿಯುಸಿ ವಿದ್ಯಾರಂಭ

ವಿಜಯವಾಣಿ ಸುದ್ದಿಜಾಲ ಉಡುಪಿ

ಸ್ವಯಂ ಶಿಸ್ತು ಅಳವಡಿಸಿಕೊಂಡು ಶ್ರದ್ಧೆ, ಭಕ್ತಿ, ನಿರಂತರ ಪ್ರಯತ್ನದಿಂದ ಸಾಧನೆ ಮಾಡಲು ಸಾಧ್ಯ. ಪಾಲಕರೂ ಸಹ ಮನೆಯಲ್ಲಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಜವಾಬ್ದಾರಿ ನಿಭಾಯಿಸಿದರೆ ವಿದ್ಯಾ ಸಂಸ್ಥೆಯಲ್ಲಿ ಅಧ್ಯಾಪಕರು ಸಂಸ್ಕಾರಯುತ ಶಿಕ್ಷಣ ನೀಡುತ್ತಾರೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಸ್ಕಾರ ಪಡೆದು ಭವ್ಯ ಭಾರತದ ಸುಪ್ರಜೆಗಳಾಗಬೇಕು ಎಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಗೌರವ ಮಹಾಕಾರ್ಯದರ್ಶಿ ಡಾ. ಎ.ಪಿ. ಭಟ್​ ಆಶಯ ವ್ಯಕ್ತಪಡಿಸಿದರು.

ಉಡುಪಿಯ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಜೂನ್​ 2ರಂದು ಆಯೋಜಿಸಿದ್ದ ಪ್ರಥಮ ಪಿಯುಸಿ ತರಗತಿಯ ವಿದ್ಯಾರಂಭ ಹಾಗೂ ಪೂರ್ವ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಾಲಕರ ಪಾತ್ರ ದೊಡ್ಡದು

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಪಿ.ಎಸ್​. ಐತಾಳ ಮಾತನಾಡಿ, ತಂತ್ರಜ್ಞಾನದಿಂದ ಪ್ರಗತಿ ಸಾಧ್ಯ. ಹೀಗಾಗಿ ಮಕ್ಕಳ ಶೈಕ್ಷಣಿಕ ಗುರಿಯನ್ನು ಅತ್ಯುತ್ತಮವಾಗಿ ರೂಪಿಸುವಲ್ಲಿ ಪಾಲಕರ ಪಾತ್ರ ದೊಡ್ಡದು. ಗುಣಮಟ್ಟದ ಶಿಕ್ಷಣ ನೀಡಿ ಪೂರ್ಣಪ್ರಜ್ಞರನ್ನಾಗಿಸುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ ಎಂದರು.

ಪ್ರಾಂಶುಪಾಲ ಸಂತೋಷಕುಮಾರ್​ ಕಾಲೇಜಿನ ನೀತಿ, ನಿಯಮಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಸಿಎ ಟಿ.ಪ್ರಶಾಂತ ಹೊಳ್ಳ ಉಪಸ್ಥಿತರಿದ್ದರು.

ಇಂಗ್ಲಿಷ್​ ಉಪನ್ಯಾಸಕ ಧೀರಜ ಪ್ರಮಾಣ ವಚನ ಬೋಧಿಸಿದರು. ಇಂಗ್ಲಿಷ್​ ಪ್ರಾಧ್ಯಾಪಕಿ ಸೀಮಾ ಕ್ರಾಸ್ತಾ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀದೇವಿ ಬಾಳಿಗಾ ನಿರೂಪಿಸಿದರು. ಜೀವಶಾಸ್ತ್ರ ಪ್ರಾಧ್ಯಾಪಕಿ ವೀಣಾ ಪ್ರಭು ವಂದಿಸಿದರು.