ಬಳ್ಳಾರಿ: ಜಿಲ್ಲೆಯ ಐದು ತಾಲೂಕುಗಳ 85 ಗ್ರಾಪಂಗಳಿಗೆ ಮಂಗಳವಾರ ಮತದಾನ ನಡೆಯಿತು. 1372 ಸ್ಥಾನಗಳಿಗೆ ಸ್ಪರ್ಧಿಸಿರುವ 3288 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಮತಪೆಟ್ಟಿಗೆ ಸೇರಿತು. 701 ಮತಗಟ್ಟೆಗಳಲ್ಲಿ ಹಕ್ಕು ಚಲಾವಣೆ ನಡೆಯಿತು.
ಬಳ್ಳಾರಿ, ಕುರುಗೋಡು, ಸಿರಗುಪ್ಪ, ಹೊಸಪೇಟೆ ಹಾಗೂ ಕಂಪ್ಲಿ ತಾಲೂಕಿನಲ್ಲಿ ಮೊದಲ ಹಂತದ ಗ್ರಾಪಂ ಚುನಾವಣೆಗೆ ಮಂಗಳವಾರ ತೆರೆಬಿತ್ತು. ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮತದಾರರು ಉತ್ಸುಕತೆಯಿಂದ ಮತ ಚಲಾಯಿಸಿದರು. ಸಂಗನಕಲ್ಲು ಗ್ರಾಮದ ರಸ್ತೆಯಲ್ಲಿ ಜನರು ಜಾತ್ರೆಯಂತೆ ಸೇರಿದ್ದರು. ಮತಗಟ್ಟೆ 100 ಮೀ. ವ್ಯಾಪ್ತಿ ಹೊರಗೆ ಅಭ್ಯರ್ಥಿಗಳು ಹಾಗೂ ಅವರ ಸಂಬಂಧಿಕರು ತಮಗೆ ಮತ ಚಲಾಯಿಸುವಂತೆ ಮತದಾರರನ್ನು ಕೋರುತ್ತಿದ್ದುದು ಕಂಡುಬಂತು. ಜನರು ಕರೊನಾ ಭೀತಿ ಮರೆತಿದ್ದ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಹಾಗೂ ಮಾಸ್ಕ್ ಮರೀಚಿಕೆಯಾಗಿತ್ತು. ಆದರೆ, ಮತಗಟ್ಟೆಯೊಳಗೆ ಮತದಾರರನ್ನು ಸ್ಕ್ರೀನಿಂಗ್ ಟೆಸ್ಟ್ ಮಾಡಿ ಬಿಡಲಾಯಿತು. ಆಶಾ ಕಾರ್ಯಕರ್ತೆಯರು ಸ್ಯಾನಿಟೈಸರ್ ನೀಡಿ ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸುತ್ತಿದ್ದರು. ಮತದಾರರು ಮಾಸ್ಕ್ ಧರಿಸಿದ್ದರೂ ಪರಸ್ಪರ ಅಂತರ ಕಾಪಾಡುವಲ್ಲಿ ವಿಫಲರಾಗಿದ್ದರು.
ಸಂಗನಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 98 ವರ್ಷದ ಲಕ್ಷ್ಮಮ್ಮ ಸಂಬಂಧಿಯ ಸಹಕಾರದೊಂದಿಗೆ ನಡೆದುಕೊಂಡು ಬಂದು ಮತ ಚಲಾಯಿಸಿದರು. ಕೆಲ ಮತದಾರರು ಆಟೋಗಳಲ್ಲಿ ಆಗಮಿಸಿ ಮತದಾನ ಮಾಡಿದರು. ಗ್ರಾಪಂ ಚುನಾವಣೆಯಲ್ಲಿ ಪಕ್ಷ ಸಂಬಂಧವೇ ಇಲ್ಲ. ಸ್ಥಳೀಯವಾಗಿ ಪ್ರತಿಷ್ಠೆಯಾಗಿರುವುದರಿಂದ ಭಾರೀ ಜಿದ್ದಾಜಿದ್ದಿ ಏರ್ಪಟ್ಟಿದೆ. ಜಾತಿ, ಹಣ ಬಲ ಹಾಗೂ ಇತರ ಅಂಶಗಳು ಪ್ರಮುಖ ಪಾತ್ರವಹಿಸಿವೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.
ಪಂಚಾಯತ್‌ರಾಜ್ ವ್ಯವಸ್ಥೆ ಜಾರಿಗೆ ಬಂದ ಬಳಿಕ ಕಪ್ಪಗಲ್ಲು ಗ್ರಾಪಂಗೆ ಮೊದಲ ಬಾರಿಗೆ ಮತದಾನ ನಡೆಯಿತು. 1987ರಿಂದ ಅವಿರೋಧ ಅಯ್ಕೆ ನಡೆದಿತ್ತು. ಗ್ರಾಪಂಗೆ ಮೊದಲ ಬಾರಿ ಸ್ಪರ್ಧೆ ಏರ್ಪಟ್ಟ ಹಿನ್ನೆಲೆಯಲ್ಲಿ ಜನರು ಉತ್ಸಾಹದಿಂದ ಮತ ಚಲಾಯಿಸಿದರು. ಮಾಸ್ಕ್ ಧರಿಸಿದವರಿಗೆ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ನೀಡಿ ಮತಗಟ್ಟೆಯೊಳಗೆ ಬಿಡಲಾಯಿತು. ಐದು ತಾಲೂಕುಗಳಲ್ಲಿ ಬೆಳಗ್ಗೆ 9ಕ್ಕೆ 12.09, 11ಕ್ಕೆ 32.01 ಶೇಕಡ ಮತ ಚಲಾವಣೆಯಾಗಿತ್ತು.