ಜಿಲ್ಲೆ

ಬೆಂಗಳೂರು-ಮೈಸೂರು ನಡುವೆ ಎಲೆಕ್ಟ್ರಿಕಲ್ ಮೊದಲ ಬಸ್ ಸಂಚಾರ

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಅಂತರ-ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಮೊದಲ ಬಸ್ ಸೋಮವಾರ ಬೆಂಗಳೂರು ಮತ್ತು ಮೈಸೂರು ಮಹಾನಗರಗಳ ನಡುವೆ ಮೊದಲ ಸಂಚಾರ ಆರಂಭಿಸಿತು.


ಕೆಎಸ್‌ಆರ್‌ಟಿಸಿ ಮೊದಲ ಬಾರಿಗೆ ಈ ಪ್ರಯೋಗಕ್ಕೆ ಮುಂದಾಗಿದ್ದು, ವಾಯು ಮತ್ತು ಶಬ್ದಮಾಲಿನ್ಯ ರಹಿತ ಎಲೆಕ್ಟ್ರಿಕಲ್ ಬಸ್ಸಿನಲ್ಲಿ ಮೊದಲ ಬಾರಿಗೆ ಪ್ರಯಾಣಿಸಿದ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಸೋಮವಾರ ಬೆಳಗ್ಗೆ 6.45ಕ್ಕೆ ಮೆಜೆಸ್ಟಿಕ್‌ನಿಂದ ಸಂಚಾರ ಆರಂಭಿಸಿ ನಂತರ ಮಾರ್ಗಮಧ್ಯ ಸ್ಯಾಟಲೈಟ್‌ನಲ್ಲಿ 7.45ರವರೆಗೆ ನಿಂತ ಬಸ್ ಬಳಿಕ ಅಲ್ಲಿಂದ ಬೆಳಗ್ಗೆ 9.35 ವೇಳೆಗೆ ಮೈಸೂರು ತಲುಪಿತು. ಒಟ್ಟು 47 ಸೀಟುಗಳಿದ್ದು, ಮೊದಲ ಸಂಚಾರದಂದು 35 ಜನರು ಪ್ರಯಾಣಿಸಿದರು. ಬಳಿಕ ಮತ್ತೆ ಮಧ್ಯಾಹ್ನ 12 ಗಂಟೆಗೆ ಆರಂಭಗೊಂಡ ಎರಡನೆ ಸಂಚಾರದಲ್ಲಿ ಬಹುತೇಕ ಎಲ್ಲ ಸೀಟುಗಳು ಭರ್ತಿಯಾಗಿದ್ದವು.

ನೂತನ ಎಲೆಕ್ಟ್ರಿಕಲ್ ಬಸ್ಸಿನಲ್ಲಿ ಕ್ಯಾಮರಾ ಅಳವಡಿಸಲಾಗಿದೆ. ಅಲ್ಲದೆ ಡಿಜಿಟಲ್ ಸ್ಕ್ರಾಲಿಂಗ್ ಮೂಲಕ ಪ್ರಯಾಣಿಕರ ನಿಲುಗಟೆ ಸ್ಥಳದ ಬೋರ್ಡಿಂಗ್ ವ್ಯವಸ್ಥೆಯಿದೆ. ಇತ್ತೀಚಿನ ಅತ್ಯಾಧುನಿಕ ಡಿಜಿಟಲ್ ಟಿವಿ ಹಾಗೂ ಪ್ರಯಾಣಿಕರಿಗೆ ಅನೂಕೂಲವಾಗುಂತೆ ಮೊಬೈಲ್ ಚಾರ್ಜಿಂಗ್ ಯುಎಸ್‌ಬಿ ಕೇಬಲ್ ವ್ಯವಸ್ಥೆ ಅಳವಡಿಸಲಾಗಿದೆ.

ನೂತನ ಇಲೆಕ್ಟ್ರಿಕ್ ಇವಿ ಪವರ್ ಪ್ಲಸ್ ಮೂಲಕ ಬಸ್ಸಿನ ಆಪರೇಟಿಂಗ್ ನಡೆಯಲಿದ್ದು, ಸಂಪೂರ್ಣ ಏರ್ ಕಂಡಿಷನ್ ಹೊಂದಿದೆ. ಅಲ್ಲದೆ ಪ್ರಯಾಣಿಕರ ಸುರಕ್ಷತೆಯ ಉದ್ದೇಶದಿಂದ ಸೀಟ್‌ಬೆಲ್ಟ್ ಅಳವಡಿಸಲಾಗಿದೆ. ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ ಗರಿಷ್ಠ 330 ಕಿ.ಮೀ. ಸಂಚರಿಸುವ ಸಾಮರ್ಥ್ಯ ಹೊಂದಿದೆ.