ಜಿಲ್ಲೆ

ಮೊದಲ ದಿನವೇ ಆವೇಶ, ಪ್ರತಿಭಟನೆಯ ಆಕ್ರೋಶ; ಮತಾಂತರ ಸದ್ದು, ಕಾಡಿದ ಶಾಸಕರ ಗೈರು

Webdesk - Ravikanth

ಬೆಳಗಾವಿ: ಸೋಮವಾರ ಸುವರ್ಣ ವಿಧಾನಸೌಧದಲ್ಲಿ ಪ್ರಾರಂಭ ವಾದ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಿರೀಕ್ಷೆಯಂತೆ ಉತ್ತರ ಕರ್ನಾಟಕದ ಜನರ ಭಾವನೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು, ಈ ಭಾಗದ ಪ್ರಮುಖ ಯೋಜನೆಗಳು ಮತ್ತು ಸಮಸ್ಯೆಗಳ ಚರ್ಚೆಗೆ ಆದ್ಯತೆ ಎಂಬ ಸ್ಪಷ್ಟ ಸಂದೇಶವನ್ನು ಆಡಳಿತ ಹಾಗೂ ಪ್ರತಿಪಕ್ಷಗಳು ರವಾನಿಸಿವೆ. ಬರ, ಅತಿವೃಷ್ಟಿ, ಪ್ರವಾಹ, ಕರೊನಾ ಉಪಟಳದ ಕಾರಣಕ್ಕೆ ಮೂರು ವರ್ಷಗಳ ಬಳಿಕ ಶುರುವಾದ ಅಧಿವೇಶನದ ಕಾರ್ಯ-ಕಲಾಪ ಶಾಂತವಾಗಿದ್ದರೆ, ಹೊರಗೆ ರೈತರ ಪ್ರತಿಭಟನೆಗಳ ಬಿಸಿ ಹಾಗೂ ರಾಜಕೀಯ ನಾಯಕರ ಹೇಳಿಕೆಗಳ ಅಬ್ಬರ ಕಂಡುಬಂತು. ಉಭಯ ಸದನಗಳು ಸೇರುವ ಮುನ್ನ ನಡೆದ ಕಲಾಪ ಸಲಹಾ ಸಮಿತಿ ಸಭೆಯು ಉತ್ತರ ಕರ್ನಾಟಕ ಕೇಂದ್ರಿತ ವಿಷಯಗಳ ಮೇಲೆ ಹೆಚ್ಚು ಬೆಳಕು ಚೆಲ್ಲುವುದಕ್ಕೆ ಮುನ್ನುಡಿ ಬರೆಯಿತು. ಜತೆಗೆ ಈಗಾಗಲೇ ಸಚಿವ ಸಂಪುಟ ಅನುಮೋದಿಸಿದ ವಿಧೇಯಕಗಳ ಮಂಡನೆ ಸಹಿತ ಸರ್ಕಾರದ ವ್ಯವಹಾರಗಳು ಸುಸೂತ್ರ ವಾಗಿ ನಡೆಯುವುದಕ್ಕೂ ಸಹಮತ ವ್ಯಕ್ತಪಡಿಸಿತು.

ನಿಂಬಾಳ್ಕರ್ ಪಾದಯಾತ್ರೆ: ಖಾನಾಪುರ ವಿಧಾನಸಭೆ ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಒತ್ತಾಯಿಸಿ, ಕ್ಷೇತ್ರದ ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಖಾನಾಪುರದಿಂದ ಸುವರ್ಣ ವಿಧಾನಸೌಧ ಚಲೋ ಪಾದಯಾತ್ರೆ ನಡೆಯಿತು. ಪಾದಯಾತ್ರೆಯ ಮೂಲಕ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಪ್ರಯತ್ನವನ್ನು ಮಾರ್ಗ ಮಧ್ಯೆಯೇ ಪೊಲೀಸರು ತಡೆದರು. ಇನ್ನು ಕೇಂದ್ರದ ರೀತಿಯಲ್ಲಿ ಎಪಿಎಂಸಿ, ಕೃಷಿ ಭೂಸುಧಾರಣೆ ಕಾಯ್ದೆಗಳನ್ನು ವಾಪಸ್ ಪಡೆಯದಿದ್ದರೆ ಸುವರ್ಣ ವಿಧಾನಸೌಧಕ್ಕೆ ಲಗ್ಗೆಯಿಡುತ್ತೇವೆ ಎಂಬ ರೈತರ ಗುಡುಗಿಗೆ ಸರ್ಕಾರ ಬೆಚ್ಚಿತು.

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ದೌಡಾಯಿಸಿ, ಕೋಡಿಹಳ್ಳಿ ಚಂದ್ರಶೇಖರ್ ಮತ್ತಿತರ ಮುಖಂಡರ ಜತೆಗೆ ಮಾತುಕತೆ ನಡೆಸಿದರು. ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಗಮನಕ್ಕೆ ತರುವೆ ಎಂಬ ಭರವಸೆ ನೀಡಿ, ಮುತ್ತಿಗೆ ಕೈಬಿಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು.

ಅತಿವೃಷ್ಟಿಯ ಪ್ರತಿಧ್ವನಿ: ಸದನ ಸಂಪ್ರದಾಯ, ನಿಗದಿತ ನಿಯಮಾವಳಿ ಪ್ರಕಾರ, ಅಗಲಿದ ಗಣ್ಯರಿಗೆ ಸಂತಾಪ ಸೂಚನೆ, ಪ್ರಶ್ನೋತ್ತರ ಕಲಾಪ, ಗಮನಸೆಳೆಯುವ ಸೂಚನೆಗಳ ಮೇಲಿನ ಚರ್ಚೆ ಶಾಂತರೀತಿಯಲ್ಲಿ ನಡೆದರೆ, ಮಧ್ಯಾಹ್ನದ ನಂತರ ಅತಿವೃಷ್ಟಿ, ನೆರೆ ಪ್ರತಿಧ್ವನಿಸಿತು. ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಉಭಯ ಸದನಗಳಲ್ಲಿ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಎಸ್.ಆರ್.ಪಾಟೀಲ್ ನಿಲುವಳಿ ಸೂಚನೆ ಮಂಡಿಸಿ, ಅತಿವೃಷ್ಟಿ ಮತ್ತು ಪ್ರವಾಹ ಪರಿಹಾರ ವಿತರಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು. ಸತತ ಮೂರು ವರ್ಷಗಳ ಕಾಲ ಬರ, ನೆರೆ, ಅತಿವೃಷ್ಟಿಯಿಂದ ರಾಜ್ಯ ಅದರಲ್ಲೂ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ತತ್ತರಿಸಿದ್ದು, 86,000 ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ ಎಂದು ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಯುದ್ಧೋಪಾದಿಯಲ್ಲಿ ಪರಿಹಾರ ಮತ್ತು ಪುನರ್​ವಸತಿ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರ ಎಡವಿದರೆ, ಕೇಂದ್ರ ಸರ್ಕಾರ ನೆರವಿಗೆ ಬಾರದೆ ರಾಜ್ಯದ ಜನರನ್ನು ಸಂಕಷ್ಟಕ್ಕೆ ತಳ್ಳಿವೆ ಎಂದು ಚರ್ಚೆ ಪ್ರಾರಂಭಿಸಿ,ಜನರ ಕಷ್ಟ-ಕಾರ್ಪಣ್ಯ, ಸರ್ಕಾರದ ವಿಫಲತೆ ಎಳೆಎಳೆಯಾಗಿ ಬಿಚ್ಚಿಟ್ಟು ಜನರ ಮುಂದಿಡಲು ತಯಾರಾಗಿದ್ದೇವೆ ಎಂಬ ಸೂಚನೆಯನ್ನು ಪ್ರತಿಪಕ್ಷಗಳು ನೀಡಿದವು.

ಮತಾಂತರದ ಚರ್ಚೆ: ಇದೇ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡಿಸಲು ಸರ್ಕಾರ ತಯಾರಿ ನಡೆಸಿದೆ ಎಂಬ ತರ್ಕ, ಅನುಮಾನದ ನಡುವೆ ಸುವರ್ಣ ವಿಧಾನಸೌಧದ ಬಳಿ ಈ ಕುರಿತು ಹೇಳಿಕೆಗಳು ಸದ್ದು ಮಾಡಿದವು. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೂಕ್ಷ್ಮವಾಗಿ ಮತಾಂತರ ನಿಷೇಧ ಕಾಯ್ದೆ ಅವಶ್ಯಕತೆ ಪ್ರತಿಪಾದಿಸಿದರೆ, ಹಲವು ಸಚಿವರು ಕಾಯ್ದೆ ಜಾರಿಗೆ ತಂದೇ ತರುತ್ತೇವೆ ಎಂದು ಸಾರಿದರು. ಒಂದು ಸಮುದಾಯ ಗುರಿ ಮಾಡಿಕೊಂಡು ಕಾಯ್ದೆ ಜಾರಿಗೆ ಸರ್ಕಾರ ಮುಂದಾಗಿದ್ದು, ಯಾವುದೇ ಕಾರಣಕ್ಕೂ ಈ ಮಸೂದೆ ಮಂಡಿಸಲು ಬಿಡುವುದಿಲ್ಲ, ವಿರೋಧಿಸಿಯೇ ಸಿದ್ಧವೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಏರುಧ್ವನಿ ಯಲ್ಲಿ ಪುನರುಚ್ಚರಿಸಿದ್ದು, ಮಸೂದೆ ಕುರಿತು ಸದನದಲ್ಲಿ ಕಾವೇರಿದ ಚರ್ಚೆಗೆ ವೇದಿಕೆ ಸಜ್ಜುಗೊಳಿಸಿದ್ದಾರೆ.

ಸದನ ಖಾಲಿ ಖಾಲಿ: ಚಳಿಗಾಲ ಅಧಿವೇಶನದ ಮೊದಲ ದಿನ ಉಭಯ ಸದನಗಳಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಇತ್ತು. ಸಂತಾಸ ಸೂಚನೆ ಗೊತ್ತುವಳಿ ಮಂಡಿಸಿದ ಸಂದರ್ಭ ವಿಧಾನಸಭೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ 80 ಶಾಸಕರು ಇದ್ದರು. ಮಧ್ಯಾಹ್ನ ಊಟದ ವಿರಾಮ ಬಳಿಕ ಆರಂಭವಾದ ಪ್ರಶ್ನೋತ್ತರ ಕಲಾಪದಲ್ಲಿ 60 ಸದಸ್ಯರು ಮಾತ್ರ ಉಪಸ್ಥಿತರಿದ್ದರು. ಕೆಲ ಯುವ ಶಾಸಕರು ಸದನಕ್ಕೆ ಆಗಮಿಸುವುದು, ಎದ್ದು ಹೋಗುವುದು ಸಾಮಾನ್ಯವಾಗಿತ್ತು. ಹಿರಿಯರು ಮತ್ತು ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಕಲಾಪ ಮುಗಿಯುವ ತನಕ ಕುಳಿತಿದ್ದು ವಿಶೇಷವಾಗಿತ್ತು. ಮೇಲ್ಮನೆಯಲ್ಲಿಯೂ ಬಿಜೆಪಿಯ 23, ವಿಪಕ್ಷಗಳ 18 ಸದಸ್ಯರಿದ್ದರು.

ರೈತರ ಆಕ್ರೋಶ ತಣಿಸಲು ಮುಖ್ಯಮಂತ್ರಿ ಕಸರತ್ತು

ಕೃಷಿ ಕಾಯ್ದೆಗಳನ್ನು ಕೇಂದ್ರ ವಾಪಸ್ ಪಡೆದ ನಡೆಯನ್ನೇ ರಾಜ್ಯವೂ ಅನುಸರಿಸಬೇಕು ಎಂದು ಪಟ್ಟು ಹಿಡಿದಿರುವ ರೈತರ ಆಕ್ರೋಶ ತಣಿಸಲು ಸಿಎಂ ಬಸವರಾಜ ಬೊಮ್ಮಾಯಿ ಕಸರತ್ತು ನಡೆಸಿದ್ದಾರೆ. ಅಧಿವೇಶನ ಪ್ರಾರಂಭಕ್ಕೆ ಮುನ್ನ ಈ ಕುರಿತು ಹೋರಾಟ ನಿರತ ರೈತ ಸಂಘಟನೆಗಳಿಗೆ ಸಂದೇಶ ರವಾನಿಸಿದ್ದು, ವಾರಾಣಸಿಗೆ ಹೋಗಿ ಬಂದ ನಂತರ ಮಾತುಕತೆ ನಡೆಸುವ ಸಾಧ್ಯತೆಗಳಿವೆ. ಭೂಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ಮತ್ತು ಗುತ್ತಿಗೆ ಒಪ್ಪಂದ ಕೃಷಿಗೆ ಅವಕಾಶ ನೀಡುವ ಕಾನೂನು ರದ್ದುಪಡಿಸುವಂತೆ ರೈತರು ಒತ್ತಡ ಹೇರಿದ್ದಾರೆ.