ಬೆಂಗಳೂರು: ವಿಮೆ, ಅಡುಗೆ ಅನಿಲ ಬಿಲ್, ಬಾಡಿಗೆ ಪಾವತಿಸಿದೆ. ನನ್ನಿಂದ ಎಲ್ಲವನ್ನೂ ಆಕೆ ಪಡೆದಿದ್ದಳು. ಅದೇನೋ ಹೇಳುತ್ತಾರಲ್ಲ. ವಿಷ ಇದ್ದವರು ಸ್ನೇಹದ ಮುಖವಾಡ ಧರಿಸುತ್ತಾರೆ. ಹೀಗೆಯೇ ಆಕೆ ಸಹ ನನ್ನ ಜೀವನದೊಳಗೆ ಹೆಜ್ಜೆ ಇಟ್ಟಳು..
ಇದು ಪೇಯಿಂಗ್ ಗೆಸ್ಟ್ ಮುಂಭಾಗ ಶುಭಶ್ರೀ ಪ್ರಿಯದರ್ಶಿನಿ ಮೇಲೆ ಗುಂಡು ಹಾರಿಸಿದ್ದ ಒಡಿಶಾದ ಭಗ್ನಪ್ರೇಮಿ ಅಮರೇಂದ್ರ ಪಟ್ನಾಯಕ್, ಆತ್ಮಹತ್ಯೆ ಯತ್ನಕ್ಕೂ ಮುನ್ನ ಬರೆದಿಟ್ಟಿರುವ ಮನದಾಳದ ಮಾತುಗಳು. ಫೆ.25ರಂದು ಮುನೆಕೋಳಾಲು ಬಳಿಯ ಮಂಜುನಾಥ ಲೇಔಟ್ನ ಪೇಯಿಂಗ್ ಗೆಸ್ಟ್ ಮುಂಭಾಗ ಶುಭಶ್ರೀ ಮೇಲೆ ಗುಂಡಿನ ದಾಳಿ ನಡೆಸಿ ಬಳಿಕ ಕತ್ತು ಕೊಯ್ದುಗೊಂಡು ಆತ್ಮಹತ್ಯೆ ಯತ್ನಕ್ಕೂ ಮೊದಲು ಅಮರೇಂದ್ರ 17 ಪುಟಗಳ ಡೆತ್ನೋಟ್ ಬರೆದಿದ್ದ. ಒಡಿಸ್ಸಿ ಭಾಷೆಯಲ್ಲಿದ್ದ ಬರವಣಿಗೆಯನ್ನು ಮಾರತ್ಹಳ್ಳಿ ಪೊಲೀಸರು ಭಾಷಾ ತಜ್ಞರಿಂದ ಕನ್ನಡಕ್ಕೆ ಅನುವಾದ ಮಾಡಿಸಿದ್ದಾರೆ.
ಒಳ್ಳೆಯ ಹುಡುಗನಾಗಿ ಬೆಳೆದು ತಂದೆ-ತಾಯಿ ಆಸೆಯಂತೆ ಉತ್ತಮ ಕೆಲಸಕ್ಕೆ ಸೇರಿ ವಾರ್ಷಿಕ 15 ಲಕ್ಷ ರೂ. ವೇತನ ಸಂಪಾದನೆ ಮಾಡುತ್ತಿದ್ದೆ. ಮನೆ ಕಟ್ಟಿಸಿ ಜೀವನದಲ್ಲಿ ಆನಂದವಾಗಿದ್ದೆ. ಅದೇ ವೇಳೆಗೆ ಶುಭಶ್ರೀ ಮತ್ತು ಆಕೆ ಅಕ್ಕ ನನ್ನ ಜೀವನ ಪ್ರವೇಶಿಸಿದರು. ಅನೇಕ ಬಾರಿ ಸಹಾಯ ಮಾಡಿದ್ದೆ. ವಿಮೆ, ಅಡುಗೆ ಅನಿಲ ಬಿಲ್ ಎಲ್ಲವನ್ನೂ ಪಾವತಿಸಿದ್ದೆ. ಸ್ನೇಹದ ಮುಖವಡ ಧರಿಸಿ ಶುಭಶ್ರೀ ನನ್ನ ಜೀವನದೊಳಗೆ ಹೆಜ್ಜೆ ಇಟ್ಟು ಲೂಟಿ ಮಾಡಿದಳು. ಚಿತ್ರಹಿಂಸೆಗೆ ಗುರಿ ಮಾಡಿ ಅತ್ಯಾಚಾರ ಮಾಡಿದಳು. ಕೊನೆಗೆ ನನ್ನ ವಿರುದ್ದವೇ ಸುಳ್ಳು ದೂರನ್ನು ಪೋಲಿಸರಿಗೆ ಕೊಟ್ಟು ಮರ್ಯಾದೆ ತೆಗೆದಳು. ತಂದೆ-ತಾಯಿಗೆ ಮುಖ ತೋರಿಸದಂತೆ ಮಾಡಿದಳು. ಕೊನೆಗೆ ಒಬ್ಬಂಟಿ ಆಗಿದ್ದೆ.
ನನ್ನ ಸಂಬಂಧಿಕರ ಒತ್ತಾಯದ ಮೇರೆಗೆ ಮದುವೆಗೆ ಒಪ್ಪಿ ಫೆ. 26ಕ್ಕೆ ಉಂಗುರ ತೊಡಿಸುವ ಶಾಸ್ತ್ರ ಇಟ್ಟುಕೊಂಡಿದ್ದೆವು. ದೇವರು ಒಳ್ಳೆಯ ದಿನಗಳನ್ನು ಕೊಡುತ್ತಿದ್ದಾನೆ ಎನ್ನುವ ಆಸೆಯೂ ಹುಟ್ಟಿತ್ತು. ಅಷ್ಟರಲ್ಲಿ ಶುಭಶ್ರೀ, ನಾನು ಮದುವೆ ಆಗುವ ಹುಡುಗಿ
ಮೊಬೈಲ್ಗೆ ಹಳೆಯ ಫೋಟೋಗಳನ್ನು ಕಳುಹಿಸಿ ಮುರಿದು ಹಾಕಿದಳು. ಜೀವನ ಹಾಳು ಮಾಡಬೇಡವೆಂದು ಶುಭಶ್ರೀ ಮತ್ತು ಆಕೆ ಪಾಲಕರ ಬಳಿ ಪರಿಪರಿಯಾಗಿ ಕೇಳಿಕೊಂಡೆ. ಆದರೆ, ಆಕೆಯಿಂದ ಬಂದಿದ್ದು ಕೊಳಕು ಬೈಗುಳ, ನಿಂದನೆ, ಬೆದರಿಕೆ ಮಾತ್ರ. ಫೆ.14ಕ್ಕೆ ಪ್ರೇಮಿಗಳ ದಿನ ಆಕೆಯನ್ನು ಸಂರ್ಪಸಲು ಪ್ರಯತ್ನಿಸಿದೆ. ಹೊಸ ಬಾಯ್ಫ್ರೆಂಡ್ ಜತೆ ಮೂರು ದಿನ ಕಾಲ ಕಳೆಯುತ್ತಿದ್ದಳು. ಅವರ ಕಡೆಯಿಂದ ಬೆದರಿಕೆ ಸಹ ಹಾಕಿಸಿದ್ದಳು. ದಾರಿ ಕಾಣದೆ ತಪು್ಪ ಮಾಡಿದೆ ಎಂದು ಅಮರೇಂದ್ರ ಬರೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಟರ್ನೆಟ್ನಲ್ಲಿ ಗನ್ ಖರೀದಿ
ಶುಭಶ್ರೀ ಧಮ್ಕಿ ಹಾಕಿದಾಗ ದಾರಿ ಕಾಣದೆ ಇಂಟರ್ನೆಟ್ನಲ್ಲಿ ಗನ್ ಖರೀದಿಗೆ ಹುಡುಕಾಟ ನಡೆಸುತ್ತಿದ್ದಾಗ ಇಬ್ರಾಹಿಂ ಸಂಪರ್ಕ ಲಭ್ಯವಾಯಿತು. ದುಬಾರಿ ಆದರೂ ಪಿಸ್ತೂಲ್ ಖರೀದಿಸಬೇಕಾಗಿತ್ತು ಎಂದು ಅಮರೇಂದ್ರ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ ಬಗ್ಗೆಯೂ ಡೆತ್ನೋಟ್ನಲ್ಲಿ ಸುಳಿವು ನೀಡಿದ್ದಾನೆ.
ಜ್ಯೋತಿರ್ಲಿಂಗಗಳ ದರ್ಶನ
ಅಮರೇಂದ್ರ 6 ಜ್ಯೋತಿರ್ಲಿಂಗಗಳ ದರ್ಶನ ಮಾಡಿದ್ದ. ಪ್ರಮುಖ ಶಿವನ ದೇವಸ್ಥಾನಕ್ಕೂ ಹೋಗಬೇಕೆಂದು ಪ್ಲ್ಯಾನ್ ಮಾಡಿದ್ದ. ತಂಜಾವೂರು, ಶ್ರೀರಂಗಪಟ್ಟಣ, ರಮಣ ಮಹರ್ಷಿ ಆಶ್ರಮಕ್ಕೂ ಭೇಟಿ ಕೊಡುವ ಯೋಜನೆ ಹೊಂದಿದ್ದ.