ವಿಟ್ಲ; ಕರ್ನಾಟಕ-ಕೇರಳ ಗಡಿಭಾಗದ ಸಾಲೆತ್ತೂರು ಕೊಡಂಗೆಯ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ವೇಳೆ ವಿಟ್ಲ ಪೊಲೀಸ್ ಉಪನಿರೀಕ್ಷಕರನ್ನು ಒಳಗೊಂಡ ತಂಡದ ಮೇಲೆ ಗುಂಡಿನ ದಾಳಿ ನಡೆಸಿ, ಪರಾರಿಯಾಗಲು ಯತ್ನಿಸಿದ ಡಿ ಗ್ಯಾಂಗ್‌ನ ಮೂವರನ್ನು ಶುಕ್ರವಾರ ಮುಂಜಾನೆ ಬಂಧಿಸಲಾಗಿದೆ.
ಕೇರಳ ಮಂಜೇಶ್ವರ ಮಂಗಲ್ಪಾಡಿ ಬೈತಿಲ ನಿವಾಸಿ ಅಬ್ದುಲ್ ಲತೀಫ್ ಯಾನೆ ಲತ್ತಿ ಯಾನೆ ಲತೀಫ್ (23), ಮೀಂಜ ಮೀಯಪದವು ಬೆಚ್ಚಂಗಳ ನಿವಾಸಿ ಮಹಮ್ಮದ್ ಶಾಕೀರ್ ಯಾನೆ ಶಾಕೀರ್(26), ಮೂಡಂಬೈಲು ಅಡ್ಕಂತಗುರಿ ನಿವಾಸಿ ಮಹಮ್ಮದ್ ಅಶ್ವಕ್ ಯಾನೆ ಅಶ್ಫಾಕ್ (25) ಬಂಧಿತರು. ಒಂದು ಕಾರು, ಒಂದು ಪಿಸ್ತೂಲ್, 13 ಸಜೀವ ಗುಂಡುಗಳು, 1 ಡ್ರಾಗನ್, 1 ಕೊಡಲಿ, 1 ಚೂರಿ, ಎಲ್‌ಎಸ್‌ಡಿ ಹಾಗೂ ಎಂಡಿಎಂಎ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಅಗತ್ಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡೇ ಕಾರ್ಯಾಚರಣೆ ನಡೆಸಿದ್ದರಿಂದ ಪೊಲೀಸರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮಾರ್ಗದರ್ಶನದಲ್ಲಿ ವಿಟ್ಲ ಠಾಣೆ ಉಪನಿರೀಕ್ಷಕ ವಿನೋದ್ ರೆಡ್ಡಿ, ಬಂಟ್ವಾಳ ನಗರ ಠಾಣೆ ಉಪನಿರೀಕ್ಷಕ ಪ್ರಸನ್ನ, ಸಿಬ್ಬಂದಿ ರವೀಶ್, ಡ್ಯಾನಿ ಫ್ರಾನ್ಸಿಸ್ ತಾವ್ರೋ, ಪ್ರಸನ್ನ, ಲೋಕೇಶ್, ಪ್ರತಾಪ್, ಹೇಮರಾಜ್, ಮಧು ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
ಸ್ಥಳದಲ್ಲಿ ಬೀಡು ಬಿಟ್ಟ ಅಧಿಕಾರಿಗಳು: ಪಶ್ಚಿಮ ವಲಯ ಡಿಜಿಪಿ ದೇವಜ್ಯೋತಿ ರೇ, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಲಕ್ಷ್ಮೀಪ್ರಸಾದ್, ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೆರಳಚ್ಚು ತಜ್ಞರು ಮಾಹಿತಿ ಸಂಗ್ರಹಿಸಿದರು. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ಬೀಡು ಬಿಟ್ಟು ಕಾನೂನು ಸುವ್ಯವಸ್ಥೆ ಕಾಪಾಡುವಂತೆ ನೋಡಿಕೊಂಡರು.
ಮೀಯಪದವು ಫೈರಿಂಗ್ ನಂತರ ಎಸ್ಕೇಪ್ ಯತ್ನ: ಮಾ.25ರಂದು ರಾತ್ರಿ ಮಂಜೇಶ್ವರ ಉಪ್ಪಳದ ಕ್ಲಬ್‌ವೊಂದರಲ್ಲಿ ಡಿ ಗ್ಯಾಂಗ್ ಸದಸ್ಯರು ಗುಂಡು ಹಾರಿಸಿದ ಘಟನೆ ನಡೆದಿತ್ತು. ಮೀಯಪದವು ಭಾಗದಲ್ಲಿ ಕಾರ್ಯಾಚರಣೆ ನಡೆಸುವ ಸಂದರ್ಭ ನಡೆದ ಗುಂಡಿನ ದಾಳಿಯಲ್ಲಿ ಪೊಲೀಸ್ ವಾಹನ ಚಾಲಕ ಪ್ರಶೋಬ್ ಹಾಗೂ ಕೇರಳ ಕಾಸರಗೋಡು ಪೊಲೀಸ್ ಎಸ್.ಪಿ. ಅವರ ವಿಶೇಷ ತನಿಖಾ ತಂಡ ಬಾಲಕೃಷ್ಣ ಅವರಿಗೆ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಮೀಯಪದವು ಭಾಗದಲ್ಲಿ ಕೇರಳ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದರು. ಪೊಲೀಸರ ಮೇಲೆ ಗುಂಡು ಹಾರಾಟ ತಿಳಿಯುತ್ತಿದ್ದಂತೆ ಕೇರಳ ಗಡಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ಚುರುಕುಗೊಳಿಸಲಾಗಿತ್ತು. ಸಾಲೆತ್ತೂರು ಕೊಡಂಗೆ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಸಮಯ ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಒಂದು ಕಾರು ಬಂದು ಪೊಲೀಸರ ಮೇಲೆ ಫೈರ್ ಮಾಡಿದೆ. ಬಳಿಕ ಚೆಕ್‌ಪೋಸ್ಟ್ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಲು ಮುಂದಾದ ಕಾರು, ಚರಂಡಿಗೆ ನುಗ್ಗಿ ನಿಂತಿದೆ. ಪೊಲೀಸರು ಧಾವಿಸುತ್ತಿದ್ದುದನ್ನು ಕಂಡ ಐವರು ದುಷ್ಕರ್ಮಿಗಳು ಕಾರಿನಿಂದ ಇಳಿದು ಪರಾರಿಯಾಗಲು ಯತ್ನಿಸಿದರು. ಸಿನಿಮೀಯ ಶೈಲಿಯಲ್ಲಿ ಪೊಲೀಸರು ಬೆನ್ನಟ್ಟಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ಡಿ ಗ್ಯಾಂಗ್?: ಕೇರಳದ ಪೈವಳಿಕೆ-ಮೀಯಪದವು ಭಾಗದಲ್ಲಿ ಡಿ ಗ್ಯಾಂಗ್ ಎಂದು ಕರೆಸಿಕೊಳ್ಳುತ್ತಿರುವ ಯುವಕರ ಗುಂಪಿದೆ. ಈ ಗುಂಪು ಪಿಸ್ತೂಲ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿದೆ ಎನ್ನಲಾಗಿದೆ. ಯುವಕರು ಪಿಸ್ತೂಲನ್ನು ಪ್ರದರ್ಶಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದ ಹಿನ್ನೆಲೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಭೂಗತ ಪಾತಕಿಗಳ ನಂಟು?: ತಪ್ಪಿಸಿಕೊಂಡ ಇಬ್ಬರಲ್ಲಿ ಓರ್ವ ಡಿ ಗ್ಯಾಂಗ್ ಸದಸ್ಯನಾದರೆ, ಇನ್ನೋರ್ವ ವ್ಯಕ್ತಿ ಮಹಾರಾಷ್ಟ್ರ ಮೂಲದವನೆಂದು ಹೇಳಲಾಗಿದೆ. ಕೃತ್ಯಕ್ಕೆ ಬಳಸಿದ ಪಿಸ್ತೂಲ್ ವಿದೇಶಿ ಮೂಲದ್ದೆಂಬ ಮಾಹಿತಿಯೂ ಇದೆ. ಆರೋಪಿಗಳ ಬಳಿ ಪತ್ತೆಯಾದ ಮಾದಕ ವಸ್ತುಗಳನ್ನು ಗಮನಿಸಿದರೆ ಭೂಗತ ಪಾತಕಿಗಳ ನಂಟು ಇರುವ ಬಗ್ಗೆ ಪೊಲೀಸ್ ಮೂಲದಲ್ಲಿ ಅನುಮಾನ ವ್ಯಕ್ತವಾಗಿದೆ.
ಕೇರಳದಲ್ಲಿ ಹಲವು ಪ್ರಕರಣ: ಬಂಧಿತರ ಮೇಲೆ ಕೇರಳದ ಕುಂಬಳೆ, ಕಾಸರಗೋಡು, ಮಂಜೇಶ್ವರ ಭಾಗದಲ್ಲಿ ಮಾದಕ ವಸ್ತುಗಳ ಮಾರಾಟ, ಅಕ್ರಮ ಶಸ್ತ್ರಾಸ್ತ ಬಳಕೆ ಪ್ರಕರಣ, ಅಪಹರಣ, ಕೊಲೆ ಸಹಿತ ಹಲವು ಪ್ರಕರಣಗಳಿವೆ. ಇವರ ಪೈಕಿ ಇಬ್ಬರು ಎರಡು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದರು ಎಂಬ ಮಾಹಿತಿ ಇದೆ.
ಡ್ರಗ್ ಟ್ರಾಫಿಕಿಂಗ್ ವಿಚಾರದಲ್ಲಿ ಈ ಪ್ರಕರಣ ಬಹಳಷ್ಟು ಮಹತ್ವ ಹೊಂದಿದೆ. ಮಾರಕಾಯುಧಗಳನ್ನು ಸಂಗ್ರಹಿಸಿದ ಉದ್ದೇಶ ಹಾಗೂ ಬಳಕೆ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕಿದೆ. ಮಾದಕ ವಸ್ತುಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಗಮನಿಸಿದರೆ ಇದು ಭೂಗತ ಚಟುವಟಿಕೆಯೇ ಆಗಿದೆ. ಗಡಿಭಾಗದ ಠಾಣೆಯಾದ್ದರಿಂದ ಅಪರಾಧ ಪ್ರಕರಣಗಳೂ ಹೆಚ್ಚಾಗುತ್ತಿವೆ. ವಿಟ್ಲ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇರುವುದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಸಿಬ್ಬಂದಿ ನೇಮಕಾತಿ ನಿರೀಕ್ಷೆಯಿದೆ. ದೇವಜ್ಯೋತಿ ರೇ ಪಶ್ಚಿಮ ವಲಯ ಡಿಜಿಪಿ ಕೇರಳ ಪೊಲೀಸ್ ಕೂಂಬಿಂಗ್ ಆಪರೇಷನ್ ಸಂದರ್ಭ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಆರೋಪಿಗಳು ವಿಟ್ಲ ಪೊಲೀಸ್ ಠಾಣೆಯ ಸರಹದ್ದಿಗೆ ಬಂದಿದ್ದರು. ಮಾಹಿತಿ ಹಿನ್ನೆಲೆಯಲ್ಲಿ ಎಲ್ಲ ಚೆಕ್‌ಪೋಸ್ಟ್‌ಗಳಿಗೆ ಉಪನಿರೀಕ್ಷಕರನ್ನೇ ನೇಮಿಸಿ ಭದ್ರಪಡಿಸಲಾಗಿತ್ತು. ಕೃತ್ಯಕ್ಕೆ ಬಳಸಿದ ಪಿಸ್ತೂಲ್ ಕಂಟ್ರಿಮೇಡ್ ಈತಿ ಇಲ್ಲ. ಮ್ಯಾನಿಫ್ಯಾಕ್ಚರ್ಡ್‌ನಂತಿದೆ. ತನಿಖೆ ನಡೆಯಿತ್ತಿದೆ. ಡಾ.ಲಕ್ಷ್ಮೀ ಪ್ರಸಾದ್ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ