Fireworks explosion attibele 
ಜಿಲ್ಲೆ

ಪಟಾಕಿ ಸ್ಫೋಟದತ್ತ ಸಿಐಡಿ ಕಣ್ಣು

ಶಿವರಾಜ.ಎಂ

ಐಜಿಪಿ ಮಧುಕರ್ ಪವಾರ್ ನೇತೃತ್ವದಲ್ಲಿ ಸ್ಥಳ ಪರಿಶೀಲನೆ

ವಿಜಯವಾಣಿ ವಿಶೇಷ ಆನೇಕಲ್
ಗೋದಾಮಿನಲ್ಲಿ ಎಷ್ಟು ಪ್ರಮಾಣದ ಪಟಾಕಿ ಸಂಗ್ರಹಿಸಲಾಗಿತ್ತು. ಆಗಮನ ಮತ್ತು ನಿರ್ಗಮನ ದ್ವಾರಗಳು ಎಷ್ಟಿದ್ದವು. ಸುರಕ್ಷತಾ ಕ್ರಮ ಕೈಗೊಳ್ಳಲಾಗಿತ್ತಾ…? ಹೀಗೆ, ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾ ಸಮಗ್ರ ಮಾಹಿತಿ ಸಂಗ್ರಹಿಸಲು ಸಿಐಡಿ ತಂಡ ಮುಂದಾಗಿದೆ. ಅತ್ತಿಬೆಲೆಯಲ್ಲಿ ಶನಿವಾರ ಮಧ್ಯಾಹ್ನ ಸುಮಾರಿಗೆ ಸಂಭವಿಸಿದ ಪಟಾಕಿ ಅಂಗಡಿ ಹಾಗೂ ಗೋದಾಮಿನ ಅಗ್ನಿ ಅವಘಡದಲ್ಲಿ ಹದಿನಾಲ್ಕು ಕೂಲಿಕಾರ್ಮಿಕರು ಜೀವ ಕಳೆದುಕೊಂಡಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ, ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿದ್ದ ಬೆನ್ನಲೇ ಸಿಐಡಿ ಐಜಿಪಿ ಪ್ರವೀಣ್ ಮಧುಕರ್ ಪವಾರ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಪ್ರಕರಣದ ತನಿಖೆಗೆ ವೇಗ ನೀಡಿರುವ ಸಿಐಡಿ, ಘಟನೆಯ ಸತ್ಯಾಸತ್ಯತೆ ಅರಿಯಲು ಇಂಚಿಂಚು ಮಾಹಿತಿ ಕಲೆಹಾಕಿತು.
ಗೋದಾಮಿನ ಸಂಗ್ರಹ ಪ್ರಮಾಣ, ಅಕ್ಕಪಕ್ಕದಲ್ಲಿರುವ ವಾಣಿಜ್ಯ ಕಟ್ಟಡ ಮತ್ತು ವಿದ್ಯುತ್ ಸಂಪರ್ಕ ವ್ಯವಸ್ಥೆ, ಗೋದಾಮಿಗೆ ಎಷ್ಟು ಆಗಮನ ಮತ್ತು ನಿರ್ಗಮನದ ಬಾಗಿಲುಗಳಿದ್ದವು, ಕಟ್ಟಡ ನಿರ್ಮಾಣದ ಮಾಹಿತಿ, ಸುರಕ್ಷತಾ ಕ್ರಮ ಕೈಗೊಂಡಿರುವ ಬಗ್ಗೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಪುರುಷೋತ್ತಮ್ ಹಾಗೂ ಅತ್ತಿಬೆಲೆ ಪೊಲೀಸರ ಬಳಿ ದೀರ್ಘವಾಗಿ ಚರ್ಚಿಸಿದರು. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮರಾ ದೃಶ್ಯಾವಳಿ ಕಲೆಹಾಕಲು ಸಿಐಡಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಅಗ್ನಿಶಾಮಕ ದಳ ಅಧಿಕಾರಿಗಳು ಹಾಗೂ ಎ್ಎಸ್‌ಎಲ್ ತಂಡವೂ ಹಲವು ಸಾಕ್ಷ್ಯ ಕಲೆಹಾಕಿತು.

ಹೊಸೂರಿಗೆ ಭೇಟಿ: ಘಟನೆಯಲ್ಲಿ ಗಾಯಗೊಂಡು ತಮಿಳುನಾಡಿನ ಹೊಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯನ್ನು ಸಿಐಡಿ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿಯಾಗಿ ಮಾಹಿತಿ ಕಲೆ ಹಾಕಿದರು.

ನಿಯಮ ಉಲ್ಲಂಘನೆ ಮಳಿಗೆ ಮುಂದೆ ಪಟಾಕಿ ಅಂಗಡಿ ನಡೆಸಲಾಗುತ್ತಿತ್ತು. ಅದೇ ಕಟ್ಟಡದ ಹಿಂಬದಿಯಲ್ಲಿ ಎಕರೆ ಜಾಗದಲ್ಲಿ ಗೋದಾಮು ನಿರ್ಮಿಸಲಾಗಿತ್ತು. ಸುರಕ್ಷತೆ ಅನುಸರಿಸದೆ ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು. ಅವೈಜ್ಞಾನಿಕವಾಗಿ ಯುಪಿಎಸ್ ಅಳವಡಿಸಲಾಗಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬೆಸ್ಕಾಂ, ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷವೂ ಕಾರಣ ಎಂಬ ಆರೋಪ ಕೇಳಿ ಬಂದಿದೆ.