ಜಿಲ್ಲೆ

ಶಿಗ್ಲಿ ಗ್ರಾಮದಲ್ಲಿ ಪಟಾಕಿ ವಶ

ವೀರೇಶ ಸೌದ್ರಿ

ಲಕ್ಷ್ಮೇಶ್ವರ: ಪಟಾಕಿ ಮಾರಾಟದ ಪರವಾನಗಿ ಪತ್ರ ಹಾಗೂ ದಾಖಲೆ ಹಾಜರುಪಡಿಸದ ಶಿಗ್ಲಿ ಗ್ರಾಮದ ಅಂಗಡಿಯೊಂದರ ಪಟಾಕಿ ದಾಸ್ತಾನನ್ನು ತಹಸೀಲ್ದಾರ್ ಕೆ. ಆನಂದಶೀಲ್ ನೇತೃತ್ವದ ತಂಡ ಮಂಗಳವಾರ ವಶಕ್ಕೆ ಪಡೆದಿದೆ.

ಗ್ರಾಮದ ‘ಪ್ರವೀಣ ಪಟಾಕಿ’ ಅಂಗಡಿಯಲ್ಲಿ ಪರಿಶೀಲನೆ ನಡೆಸಿದ ಅಧಿಕಾರಗಳು, ದಾಖಲೆಗಳನ್ನು ಕಚೇರಿಗೆ ಹಾಜರಪಡಿಸಲು ಸೂಚಿಸಿದರು.
ಸರ್ಕಾರದ ಆದೇಶದನ್ವಯ ಪಟ್ಟಣ ಸೇರಿದಂತೆ ವಿವಿಧೆಡೆ ಪಟಾಕಿ ಮಾರಾಟ ಅಂಗಡಿಗಳಿಗೆ ತಂಡ ಭೇಟಿ ನೀಡಿತು. ಅನುಮತಿ ಪತ್ರ, ದಾಸ್ತಾನು ದಾಖಲೆ, ಬೆಂಕಿ ನಂದಕಗಳು, ದಾಸ್ತಾನು ಮಳಿಗೆಗಳಲ್ಲಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳು ಇತ್ಯಾದಿಗಳನ್ನು ತಂಡ ಪರಿಶೀಲಿಸಿತು.

ಈ ಕುರಿತು ಪ್ರತಿಕ್ರಿಯಿಸಿದ ತಹಸೀಲ್ದಾರ್, ಪ್ರತಿವರ್ಷ ಎಲ್ಲ ಪಟಾಕಿ ಅಂಗಡಿಗಳ ದಾಸ್ತಾನು, ದಾಖಲೆ ಪರಿಶೀಲಿಸಲಾಗುತ್ತಿದೆ. ವ್ಯಾಪಾರಸ್ಥರು ವಹಿಸಬೇಕಾದ ಕ್ರಮಗಳ ಕುರಿತು ತಿಳಿಸಲಾಗಿದೆ. ಪಟಾಕಿ ಅಂಗಡಿಗಳಲ್ಲಿ ಚಿಕ್ಕ ಮಕ್ಕಳು ಬಾರದಂತೆ ಎಚ್ಚರಿಕೆ ವಹಿಸಬೇಕು, ಅಗ್ನಿ ನಿರೋಧಕಗಳನ್ನು ಹೊಂದಿರಬೇಕು, ದಾಸ್ತಾನು- ಖರೀದಿ ಬಿಲ್‌ಗಳನ್ನು ಸರಿಯಾಗಿ ನಿರ್ವಹಿಸುವಂತೆ ಅಂಗಡಿಯವರಿಗೆ ಸೂಚಿಸಲಾಗಿದೆ ಎಂದರು.

ಪಿಎಸ್‌ಐ ಯುಸೂಫ್ ಜಮೂಲಾ, ಕಂದಾಯ ನಿರೀಕ್ಷಕ ಬಿ.ಎಂ. ಕಾತ್ರಾಳ, ಗ್ರಾಮಲೆಕ್ಕಾಧಿಕಾರಿ ಕುಲಕರ್ಣಿ ಇತರರು ತಂಡದಲ್ಲಿದ್ದರು.