ಉಡುಪಿ: ದೀಪಾವಳಿ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಮಣಿಪಾಲದಲ್ಲಿ ಯುವಕನೋರ್ವ ಕಾರಿನ ಟಾಪ್ ಮೇಲೆ ಪಟಾಕಿ ಸಿಡಿಸುತ್ತಾ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿ ವಿರುದ್ಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶಾಲ್ ಕೊಹ್ಲಿ (26) ಬಂಧಿತ ಆರೋಪಿ. ಸೆಲೂನ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಈತ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಕಾರಿನ ಮೇಲೆ ರಾಕೆಟ್ ಶಾಟ್ಸ್ ಇಟ್ಟು ಚಲಾಯಿಸಿದ್ದು, ರಸ್ತೆಯ ಎರಡೂ ಬದಿ ವಿದ್ಯುತ್ ತಂತಿ ಸುತ್ತಮುತ್ತ ಕಟ್ಟಡಗಳಿವೆ. ಜನನಿಬಿಡ ರಸ್ತೆಯಲ್ಲಿ ಹುಚ್ಚಾಟ ಪ್ರದರ್ಶಿಸಿದ ಯುವಕ ಹಾಗೂ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿದ್ದಾರೆ.