ಜಿಲ್ಲೆ

ಬೆಂಗ್ಳೂರಲ್ಲಿ ಪಟಾಕಿ ಅವಘಡ: ರಾಕೆಟ್​ ಸ್ಫೋಟಕ್ಕೆ ಬಾಲಕನ ಮುಖ ಸುಟ್ಟೋಯ್ತು, ದಾರಿಯಲ್ಲಿ ಹೋಗುತ್ತಿದ್ದವನ ಕಣ್ಣಿಗೂ ಹಾನಿ...

arunakunigal

ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆ ಜೆ.ಪಿ.ನಗರದಲ್ಲಿ ಪಟಾಕಿ ಸಿಡಿಸುವಾಗ ರಾಕೆಟ್​ ಸ್ಫೋಟಗೊಂಡು 10 ವರ್ಷದ ಬಾಲಕನೊಬ್ಬನ ಮುಖ ಸಂಪೂರ್ಣ ಸುಟ್ಟು ಹೋಗಿದೆ. ಕಣ್ಣಿಗೂ ಹಾನಿಯಾಗಿದೆ. ಇದೇ ರೀತಿ ಬೆಂಗಳೂರಿನ ವಿವಿಧೆಡೆ ಅವಘಡ ಸಂಭವಿಸಿದೆ, ಯಾರೋ ಹಚ್ಚಿದ ಪಟಾಕಿಗೆ ಬೇರೆಯವರೂ ಗಾಯಗೊಂಡಿದ್ದಾರೆ.

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ನಗರದಲ್ಲಿ ಸಿಡಿಸಿದ ಪಟಾಕಿಯಿಂದ ಈವರೆಗೂ ಮಕ್ಕಳು ಸೇರಿ 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಕಣ್ಣಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸೋಮವಾರ ನರಕಚತುದರ್ಶಿ ದಿನದಂದು ಪಟಾಕಿ ಹಚ್ಚುವ ವೇಳೆ ಉಂಟಾದ ಅವಘಡದಲ್ಲಿ ಮಿಂಟೋ ಕಣ್ಣಿನ ಆಸ್ಪತ್ರೆ ಹಾಗೂ ನಾರಾಯಣ ನೇತ್ರಾಲಯದಲ್ಲಿ ತಲಾ ಇಬ್ಬರಂತೆ ನಾಲ್ವರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನು ಹಬ್ಬಕ್ಕೂ ಮುನ್ನಾದಿನ ಭಾನುವಾರ ಮೂವರು ಗಾಯಗೊಂಡಿದ್ದರು. ಇವರಲ್ಲಿ ಇಬ್ಬರು ಮಿಂಟೋದಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.

ಜೆ.ಪಿ.ನಗರದ 10 ವರ್ಷದ ಬಾಲಕನ ಮುಖ ಸಂಪೂರ್ಣ ಸುಟ್ಟುಹೋಗಿದ್ದು, ಕಣ್ಣಿಗೂ ಹಾನಿಯಾಗಿದೆ. ಬಾಲಕನಿಗೆ ವಿಕ್ಟೋರಿಯಾದ ಸುಟ್ಟಗಾಯಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆಂಧ್ರಪ್ರದೇಶದ ಅನಂತಪುರ ಮೂಲದ 20 ವರ್ಷದ ಯುವಕ ದಾರಿಯಲ್ಲಿ ಹೋಗುತ್ತಿರುವ ವೇಳೆ ಯಾರೋ ಸಿಡಿಸಿದ ಪಟಾಕಿಯಿಂದ ಹೊರಹೊಮ್ಮಿದ ಬೆಂಕಿಯ ಕಿಡಿ ಕಣ್ಣಿಗೆ ತಾಗಿ ಗಂಭೀರವಾಗಿ ಹಾನಿಯಾಗಿದೆ. ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಫ್ರೇರೇಜರ್​ಟೌನ್​ನಲ್ಲಿ 7 ವರ್ಷದ ಬಾಲಕ ಆಟಂಬಾಂಬ್​ ಸಿಡಿಸುವ ವೇಳೆ ಅದರ ಕಿಡಿ ಕಣ್ಣಿಗೆ ಹಾರಿದೆ. ಶ್ರೀನಗರದ 18 ವರ್ಷದ ಯುವಕ ನೆರೆಯವರು ಹಚ್ಚುತ್ತಿದ್ದ ಪಟಾಕಿ ನೋಡುತ್ತಿದ್ದ ವೇಳೆ ಕಿಡಿ ಕಣ್ಣಿಗೆ ಹಾರಿ ಗಾಯಗೊಂಡು ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾನೆ.