ಜಿಲ್ಲೆ

ಖಾಸಗಿ ಆಸ್ಪತ್ರೆಗಳಿಗೆ ಅಗ್ನಿಸುರಕ್ಷತೆ ಎನ್‌ಒಸಿ ಕಡ್ಡಾಯ

ಪಂಕಜ ಕೆ.ಎಂ.

ಬೆಂಗಳೂರು: ರಾಜ್ಯದಲ್ಲಿ 21 ಮೀಟರ್‌ಗಿಂತಲೂ ಎತ್ತರದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ಅಗತ್ಯ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪನಾ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ದೆಹಲಿಯ ವಿವೇಕ್‌ ವಿಹಾರ್‌ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ಅಗ್ನಿದುರಂತದಿಂದ ನವಜಾತ ಶಿಶುಗಳು ಮೃತಪಟ್ಟ ಪ್ರಕರಣದ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಆರೋಗ್ಯ ಇಲಾಖೆಯು ಈ ಸುತ್ತೋಲೆ ಹೊರಡಿಸಿದೆ.

ದೆಹಲಿ ಆಸ್ಪತ್ರೆಯಲ್ಲಿ ತುರ್ತು ನಿರ್ಗಮನ ಮತ್ತು ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದೇ ಘಟನೆಗೆ ಕಾರಣ. ಹಾಗಾಗಿ ರಾಜ್ಯದಲ್ಲಿ 21 ಮೀಟರ್‌ಗಿಂತ ಎತ್ತರದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಂದು ಆಸ್ಪತ್ರೆಗಳು ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಅಗ್ನಿಶಾಮಕ ಇಲಾಖೆಯಿಂದ ಎನ್‌ಒಸಿ ಪಡೆಯುವುದು ಕಡ್ಡಾಯ ಎಂದು ಹೇಳಿದೆ.

21 ಮೀಟರ್‌ಗಿಂತ ಕಡಿಮೆ ಎತ್ತರದ ಕಟ್ಟಡಗಳಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಸ್ವಯಂ ಘೋಷಣಾ ಪತ್ರವನ್ನು ಅಗ್ನಿ ಶಾಮಕ ಇಲಾಖೆಗೆ ಸಲ್ಲಿಸಬೇಕು ಎಂದು ಸೂಚಿಸಿದೆ.