ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು. 
ಜಿಲ್ಲೆ

ಯಮಕನಮರಡಿಯಲ್ಲಿ ಗುಂಡಿನ ಸದ್ದು

ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಯಮಕನಮರಡಿ ಗ್ರಾಮದ ಉಪತಹಸೀಲ್ದಾರ್ ನಾಡಕಚೇರಿ ಬಳಿಯ ಕುಬೇರ ರೆಡಿಮೇಡ್ ಕ್ಲಾಥ್ ಸೆಂಟರ್‌ನ ಬಳಿ ಅಪರಿಚಿತನೋರ್ವ ಗುಂಡಿನ ದಾಳಿ ನಡೆಸಿದ್ದು, ಓರ್ವನಿಗೆ ಗಾಯವಾದ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ.
ಭರಮಾ ಭೂಪಾಲ ಧೂಪದಾಳಿ (55) ಎಂಬುವರಿಗೆ ಗುಂಡು ತಗುಲಿ ಗಾಯವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಪಂ ಚುನಾವಣೆಯ ಪ್ರಚಾರ ಮುಗಿಸಿ, ರಾತ್ರಿವೇಳೆ ಬಟ್ಟೆ ಅಂಗಡಿಯ ಬಳಿ ಸ್ಥಳೀಯ ನಿವಾಸಿಗಳು ಹಾಗೂ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಭರಮಾ ಭೂಪಾಲ ಧೂಪದಾಳಿ, ಕಿರಣ ಬಾಳಾರಾಮ ರಜಪೂತ ಹಾಗು ಅಲ್ತ್ಾ ಛಡೇದಾರ, ಆನಂದ ಈಶ್ವರ ಪಿಟಗಿ ಇವರು ಮಾತುಕತೆಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ವ್ಯಕ್ತಿಯೋರ್ವ ಏಕಾಏಕಿ ಇವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ, ಗೋಕಾಕ ಡಿವೈಎಸ್ಪಿ ಜಾವೇದ್ ಇನಾಂದಾರ, ಹುಕ್ಕೇರಿ ಸಿಪಿಐ ಕಲ್ಯಾಣಶೆಟ್ಟಿ, ಪಿಎಸ್‌ಐ ರಮೇಶ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ಗುಂಡು ಹಾರಿಸಿದ ವ್ಯಕ್ತಿಯ ಪತ್ತೆಗೆ ತನಿಖೆ ನಡೆದಿದೆ. ಗಾಯಾಳುವಿನಿಂದಲೂ ಘಟನೆ ವಿಚಾರವಾಗಿ ಮಾಹಿತಿ ಪಡೆದಿದ್ದೇವೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಗ್ರಾಪಂ ಚುನಾವಣೆ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿರುವುದು ಯಮಕನಮರಡಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.