ಹೊಸಪೇಟೆ: ದಕ್ಷಿಣ ಕಾಶಿ ಹಂಪಿಯ ವಿಜಯ ವಿಠ್ಠಲ ದೇವಸ್ಥಾನ ಸಮೀಪದ ಬಜಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಭಾನುವಾರ ಸಂಭವಿಸಿದೆ.
ಬಜಾರ್ ಪ್ರದೇಶದಲ್ಲಿ ಒಣಗಿದ್ದ ಭಾದೆ ಹುಲ್ಲಿಗೆ ಮಧ್ಯಾಹ್ನ ೧ ಗಂಟೆ ವೇಳೆಗೆ ಬೆಂಕಿ ಹೊತ್ತಿಕೊಂಡಿತ್ತು. ನೋಡ ನೋಡುತ್ತಿದ್ದಂತೆ ಬೆಂಕಿ ಧಗಧಗನೆ ಹೊತ್ತಿ ಉರಿಯಿತು. ಬೆಂಕಿ ವಿಸ್ತಾರವಾಗಿ ಚಾಚಿಕೊಳ್ಳುತ್ತಿದ್ದರಿಂದ ದೇಶ ವಿದೇಶದಿಂದ ಆಗಮಿಸಿದ್ದ ಪ್ರವಾಸಿಗರು ಕೆಲಕಾಲ ಆತಂಕಗೊಂಡಿದ್ದರು.
ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಬೇಸಿಗೆಯ ಬಿಸಿಲು ಹೆಚ್ಚಿದ್ದರಿಂದ ಸೂರ್ಯನ ಪ್ರಖರಕ್ಕೆ ಹುಲ್ಲುಗೆ ಬೆಂಕಿ ಹೊತ್ತಿಕೊಂಡಿರಬಹುದು. ಇಲ್ಲವೇ ಯಾರೋ ಕಿಡಿಗೇಡಿಗಳು ಬೆಂಕಿ ಕಡ್ಡಿ ಗೀಚಿರಬಹುದು ಎಂದು ಅಗ್ನಿ ಶಾಮಕ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಬಳಿಕ ಹಂಪಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಆದರೆ, ಘಟನೆಯಿಂದ ಯಾವುದೇ ಸ್ಮಾರಕ ಮತ್ತು ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.