ಬೆಂಗಳೂರು: ಆನಂದರಾವ್ ವೃತ್ತದ ಬಳಿ ಇರುವ ವಿದ್ಯುತ್ ಸರಬರಾಜು ಕೇಂದ್ರದ ಆವರಣದಲ್ಲಿ 66/11 ಕೆ.ವಿ. ಟ್ರಾನ್ಸ್ಫಾರ್ಮರ್ನಿಂದ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ರೀತಿಯಲ್ಲಿ ಭಾರಿ ದುರಂತವೊಂದು ತಪ್ಪಿದೆ.
ಸೋಮವಾರ (ಫೆ.17) ಮಧ್ಯಾಹ್ನ 1.15 ಗಂಟೆಗೆ ವಿದ್ಯುತ್ ಪರಿವರ್ತಕ ಘಟಕಕ್ಕೆ ಬೆಂಕಿ ತಗುಲಿತ್ತು. ಬೆಂಕಿಯ ಕೆನ್ನಾಲಿಗೆ ಕಚೇರಿಯ ಆವರಣದಲ್ಲಿ ವಿಸ್ತರಿಸಿತ್ತು. ಕೆಪಿಟಿಸಿಎಲ್ ಸಿಬ್ಬಂದಿ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ಮುಟ್ಟಿಸಿದ್ದರು. ಕೆಲವೇ ನಿಮಿಷಗಳಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ 3 ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ, 1 ಗಂಟೆವರೆಗೂ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ತಪ್ಪಿದ ಭಾರಿ ದುರಂತ!: ಆನಂದರಾವ್ ವೃತ್ತದ ಮಾರ್ಗವಾಗಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬೆಂಕಿಯ ಕಾವಿಗೆ ಟ್ರಾನ್ಸ್ ಫಾರ್ಮರ್ ಸ್ಪೋಟಗೊಂಡಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು. ಆದರೆ, ಬೆಂಕಿ ಕಾಣಿಸಿಕೊಂಡ ಕೂಡಲೇ ಎಚ್ಚೆತ್ತುಕೊಂಡ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಹೀಗಾಗಿ ಬೆಂಕಿಯ ತೀವ್ರತೆ ಹೆಚ್ಚಾಗುವ ವೇಳೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಕೆಪಿಟಿಸಿಎಲ್ ಅಧಿಕಾರಿಯೊಬ್ಬರು ತಿಳಿಸಿದರು.
3 ತಾಸು ವಿದ್ಯುತ್ ಕಡಿತ!: ಅವಘಡದಿಂದ 66/11 ಕಿಲೋವಾಟ್ ಟ್ರಾನ್ಸ್ಫಾರ್ಮರ್ ಸಂಪೂರ್ಣ ಸುಟ್ಟುಹೋಗಿದೆ. ಇದರಿಂದಾಗಿ ಶೇಷಾದ್ರಿಪುರ, ಮಲ್ಲೇಶ್ವರ, ಮೆಜೆಸ್ಟಿಕ್, ಗಾಂಧಿನಗರ, ವಿಧಾನಸೌಧ, ಶಿವಾಜಿನಗರ, ಚಿಕ್ಕಪೇಟೆ ಸೇರಿ ಮುಂತಾದ ಕಡೆಗಳಲ್ಲಿ 3 ಗಂಟೆಗೂ ಹೆಚ್ಚು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಬಳಿಕ ಕೆಪಿಟಿಸಿಎಲ್ ಇಂಜಿನಿಯರ್ ಬೇರೆ ಸ್ಟೇಷನ್ಗಳ ಮೂಲಕ ವಿದ್ಯುತ್ ಪೂರೈಕೆಯನ್ನು ಸರಿಪಡಿಸಿದರು.
ನಿಖರ ಕಾರಣ ಗೊತ್ತಾಗಿಲ್ಲ: ಟ್ರಾನ್ಸ್ಫಾರ್ಮರ್ನಲ್ಲಿನ ಬಾಯ್ಲರ್ ಬಿಸಿಯಾಗಿ ಅಥವಾ ಆಯಿಲ್ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿರುವ ಶಂಕೆಯಿದೆ. ಆದರೆ, ಇದೇ ಕಾರಣದಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ನಿಖರವಾಗಿ ಹೇಳಲಾಗದು. ಕೆಪಿಟಿಸಿಎಲ್ನ ಮುಖ್ಯ ಇಂಜಿನಿಯರ್ ಹಾಗೂ ತಾಂತ್ರಿಕ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ವಿದ್ಯುತ್ ವ್ಯತ್ಯಯ?: 66/11 ಕಿಲೋವಾಟ್ ಟ್ರಾನ್ಸ್ ಫಾರ್ಮರ್ ಸುಟ್ಟಿರುವುದರಿಂದ ನಗರದ ಕೆಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ. ಈಗಾಗಲೇ 15 ಘಟಕಗಳಿಂದ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ವರ್ಕ್ಲೋಡ್ ಹೆಚ್ಚಾಗುವುದರಿಂದ ವಿದ್ಯುತ್ ವೋಲ್ಟೇಜ್ ಕಡಿಮೆಯಾಗಲಿದೆ.