ಮಂಗಳೂರು: ಅತ್ಯಂತ ದಹನಕಾರಿ ತೈಲ ಹಾಗೂ ವಸ್ತುವನ್ನು ಗುಜರಾತ್‌ನ ಮುಂದ್ರಾ ಬಂದರಿನಿಂದ ಶ್ರೀಲಂಕಾದ ಕೊಲಂಬೊಗೆ ಒಯ್ಯುತ್ತಿದ್ದ ಬೃಹತ್ ಸರಕು ಹಡಗಿಗೆ ಗೋವಾ -ಕಾರವಾರ ನಡುವೆ ಅರಬ್ಬಿ ಸಮುದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸತತ ಪ್ರಯತ್ನದಿಂದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದರೂ, ಅಪಾಯಕಾರಿ ಸ್ಥಿತಿಯಲ್ಲಿ ಈ ಹಡಗು ಸುರತ್ಕಲ್‌ನಿಂದ 33 ನಾಟಿಕಲ್ ಮೈಲು ದೂರ (ಕುಂದಾಪುರ)ದಲ್ಲಿ ಲಂಗರು ಹಾಕಿದೆ.
ಪನಾಮಾ ದೇಶದ ಫ್ಲಾೃಗ್ ಹೊಂದಿರುವ ಎಂವಿ ಎಂ.ಫ್ರಾಂಕ್‌ಫರ್ಟ್ ಕಾರ್ಗೋ ಕಂಟೈನರ್ ಹಡಗು ತೈಲ ಹಾಗೂ ದಹನಕಾರಿ ವಸ್ತುಗಳನ್ನು ಹೇರಿಕೊಂಡು ಮುಂದ್ರಾ ಬಂದರಿನಿಂದ ಹೊರಟಿದ್ದು, ಗೋವಾದಿಂದ ಕಾರವಾರದತ್ತ ಬರುತ್ತಿದ್ದಾಗ ಜುಲೈ 19ರಂದು ಬೆಂಕಿ ಕಾಣಿಸಿಕೊಂಡಿತ್ತು. ಮಾಹಿತಿ ಸಿಕ್ಕಿದ ತಕ್ಷಣವೇ ಇಂಡಿಯನ್ ಕೋಸ್ಟ್ ಗಾರ್ಡ್(ಐಸಿಜಿ) ಬೆಂಕಿ ನಂದಿಸಲು ರಕ್ಷಣಾ ಹಡಗು ಹಾಗೂ ಹೆಲಿಕಾಪ್ಟರ್‌ಗಳನ್ನು ಬಳಸಿ ಸತತ 40 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದವು. ಈ ಹಡಗಿನಲ್ಲಿ ಒಟ್ಟು 21 ಮಂದಿ ಸಿಬ್ಬಂದಿಯಿದ್ದು, ಒಬ್ಬ ದುರಂತದಲ್ಲಿ ಸಾವನ್ನಪ್ಪಿರುವ ಅಥವಾ ಕಣ್ಮರೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಬೆಂಕಿ ಹತ್ತಿಕೊಳ್ಳಲು ಕಾರಣ, ಅದನ್ನು ಮುಂದೆ ಕೊಂಡೊಯ್ಯಲು ಸಾಧ್ಯವೇ, ಮತ್ತೆ ಇಂಜಿನ್ ಸ್ಟಾರ್ಟ್ ಮಾಡಿದರೆ ಅಪಾಯವಿದೆಯೇ ಎಂಬ ಬಗ್ಗೆ ಸಮಗ್ರವಾದ ಅಧ್ಯಯನ ನಡೆಸಿ ವರದಿ ನೀಡಲು ತಜ್ಞರ ತಂಡವೊಂದು ಶುಕ್ರವಾರ ಸಂಜೆ ಭೇಡಿ ನೀಡಿದೆ. ಸದ್ಯ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಹಡಗಿನ ಮೇಲೆ ನಿರಂತರ ನಿಗಾ ಇರಿಸಿದ್ದಾರೆ.