ಆನೇಕಲ್: ಬೊಮ್ಮಸಂದ್ರ ಕೆರೆಯಲ್ಲಿ ಬುಧವಾರ ಕಾಣಿಸಿಕೊಂಡ ಬೆಂಕಿ ಸಮೀಪದ ಗೋದಾಮು, ಸುತ್ತಮುತ್ತಲ ಕೃಷಿ ಜಮೀನಿಗೂ ಬೆಂಕಿ ವ್ಯಾಪಿಸಿ ಅಪಾರ ನಷ್ಟ ಉಂಟಾಗಿದೆ. ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ. ಇಲ್ಲಿನ ಕೆರೆ ಪಕ್ಕದಲ್ಲೇ ಇರುವ ಕೆಲ ಕಾರ್ಖಾನೆಗಳು ರಾಸಾಯನಿಕ ಮಿಶ್ರಿತ ನೀರನ್ನು ನೇರವಾಗಿ ಕೆರೆಗೆ ಹರಿಸುತ್ತಿದ್ದು, ತಿಂಗಳಿಗೊಮ್ಮೆ ಬೆಂಕಿ ಅವಘಡ ಸಂಭವಿಸುತ್ತಲೇ ಇದೆ. ಬುಧವಾರ ಮಧ್ಯಾಹ್ನ ಕೆರೆಯಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣದಲ್ಲಿ ಸುತ್ತಮುತ್ತಲ ಹೊಲ, ಗದ್ದೆ, ನೀಲಗಿರಿ ತೋಪಿಗೂ ಆವರಿಸಿತು. ಸಮೀಪದ ಗುಜರಿ ಗೋದಾಮಿನಲ್ಲಿದ್ದ ಅಪಾರ ಪ್ರಮಾಣದ ವಸ್ತು ಬೆಂಕಿಯ ಕೆನ್ನಾಲಗೆಯಲ್ಲಿ ಸುಟ್ಟು ಕರಕಲಾದವು. ದಟ್ಟ ಹೊಗೆ ಆವರಿಸಿದ್ದು ಸ್ಥಳೀಯರಲ್ಲಿ ಭಯಹುಟ್ಟಿಸಿತ್ತು. ಅಗ್ನಿಶಾಮಕ ದಳ ಸತತ ನಾಲ್ಕು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿತು. ಹೆಬ್ಬಗೋಡಿ ಪೊಲೀಸರೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.