ಜಿಲ್ಲೆ

ಉಡುಪಿಯಲ್ಲಿ ಗುಜರಿ ಅಂಗಡಿ ಗೋದಾಮಿಗೆ ಬೆಂಕಿ...

ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ

ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ನಗರದ ಅಂಬಾಗಿಲು-ಪೆರಂಪಳ್ಳಿ ರಸ್ತೆ ಮಾರ್ಗದಲ್ಲಿರುವ ಗುಜರಿ ಅಂಗಡಿಯ ಗೋದಾಮಿನಲ್ಲಿ ಮಂಗಳವಾರ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ.

ಗುಜರಿ ಸಾಮಗ್ರಿಯಿದ್ದ ಗೋದಾಮು ಸಂಪೂರ್ಣ ಸುಟ್ಟು ಕರಕಲಾಗಿದೆ. ಹನೀಫ್​ ಎಂಬರಿಗೆ ಸೇರಿದ ಗುಜರಿ ಅಂಗಡಿಯ ಗೋದಾಮಿನಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಬಳಿಕ ತೀವ್ರಗೊಂಡು ಸುತ್ಮುತ್ತಲ ಪರಿಸರಕ್ಕೂ ವ್ಯಾಪಿಸತೊಡಗಿತು.

ಅಗ್ನಿಶಾಮಕ ದಳ ಕಾರ್ಯಾಚರಣೆ

ಗುಜರಿ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಹಳೆಯ ಟೈರ್​, ಆಯಿಲ್​, ಪೇಪರ್​, ಪ್ಲಾಸ್ಟಿಕ್​ಗಳೆಲ್ಲವೂ ಬೆಂಕಿಗೆ ಆಹುತಿಯಾಗಿವೆ. ಘಟನೆ ತಿಳಿದ ಉಡುಪಿ ಮತ್ತು ಮಲ್ಪೆಯ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಭಾರಿ ಪ್ರಮಾಣದಲ್ಲಿ ಬೆಂಕಿ ಆವರಿಸಿಕೊಂಡಿದ್ದರಿಂದ ಹತೋಟಿಗೆ ತರಲು ಕೆಲಕಾಲ ಕಷ್ಟವಾಯಿತು.

ಮನೆಯಿಂದ ಜನರ ತೆರವು

ಬೆಂಕಿಯ ಕೆನ್ನಾಲಿಗೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕೂಡಲೇ ಅಕ್ಕಪಕ್ಕದ ಮನೆಯವರನ್ನು ಖಾಲಿ ಮಾಡಿಸಲಾಯಿತು. ಅಮೂಲ್ಯ ವಸ್ತುಗಳು ಹಾಗೂ ದಾಖಲೆಗಳನ್ನು ತೆಗೆದುಕೊಂಡು ಹೋಗುವಂತೆಯೂ ಸೂಚಿಸಲಾಯಿತು.

ವಾಟರ್​ ಟ್ಯಾಂಕ್​ಗಳ ಮೂಲಕವೂ ಹೆಚ್ಚುವರಿ ನೀರು ತರಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಯಿತು. ಬೆಂಕಿ ಕಾಣಿಸಿಕೊಂಡ ಕುರಿತು ನಿಖರ ಕಾರಣ ತಿಳಿದುಬಂದಿಲ್ಲ. ಉಡುಪಿ ಹಾಗೂ ಮಣಿಪಾಲ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಉಡುಪಿ ಗುಜರಿ ಅಂಗಡಿಯ ಗೋದಾಮಿನಲ್ಲಿ ಕಾಣಿಸಿಕೊಂಡಿದ್ದ ಬೆಂಕಿ.