ಜಿಲ್ಲೆ

ಪಂಪುವೆಲ್ ಶಾರ್ಟ್ ಸರ್ಕ್ಯೂಟ್‌ನಿಂದ ಗೋದಾಮಿನಲ್ಲಿ ಬೆಂಕಿ ಅವಘಡ

ಹರೀಶ ಎಂ.

ಮಂಗಳೂರು: ನಗರದ ಪಂಪ್‌ವೆಲ್ ಬಳಿ ಕೋಳಿ, ಪಶು ಆಹಾರ, ಔಷಧಿಗಳು, ಪಶುಪಾಲನೆಗೆ ಸಂಬಂಧಿಸಿದ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಮಾರಾಟ ಮಾಡುವ ಸಂಸ್ಥೆಯೊಂದರ ಗೋದಾಮಿನಲ್ಲಿ ಮಂಗಳವಾರ ಬೆಳಗ್ಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ. ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.

ಪಂಪ್‌ವೆಲ್‌ನ ವಾಣಿಜ್ಯ ಸಂಕೀರ್ಣವೊಂದರ ಮೊದಲ ಮಹಡಿಯಲ್ಲಿ ಕಾರ್ಯಾಚರಿಸುವ ಗೋದಾಮಿನಲ್ಲಿ ಬೆಳಗ್ಗೆ ಸುಮಾರು 9.15ರ ವೇಳೆಗೆ ಬೆಂಕಿಯಿಂದ ಉಂಟಾಗಿದೆ. ಮಾಹಿತಿ ತಿಳಿದ ತತ್‌ಕ್ಷಣ ಪಾಂಡೇಶ್ವರ ಅಗ್ನಿ ಶಾಮಕ ಠಾಣೆ ಅಧಿಕಾರಿ ಮತ್ತು ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ಹೆಚ್ಚುವರಿಯಾಗಿ ಕದ್ರಿ ಅಗ್ನಿ ಶಾಮಕ ದಳದ ವಾಹನ ಮತ್ತು ಸಿಬಂದಿಯನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಯಿತು.

ಘಟನೆಯಿಂದಾಗಿ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ಕೆಲ ಹೊತ್ತು ಆತಂಕಕ್ಕೂ ಕಾರಣವಾಯಿತು. ಆಹಾರ ವಸ್ತುಗಳು, ಔಷಧಿಗಳು ಇದ್ದುದರಿಂದ ಹೊಗೆ ಪ್ರಮಾಣ ಹೆಚ್ಚಿತ್ತು. ಅಗ್ನಿ ಶಾಮಕ ದಳದ ಸಿಬಂದಿಯವರೂ ಆಕ್ಸಿಜನ್ ಸಿಲಿಂಡರ್ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಅದೃಷ್ಟವಾಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.