ಜಿಲ್ಲೆ

ಕಿರಾಣಿ ಅಂಗಡಿಗೆ ಬೆಂಕಿ, ಲಕ್ಷಾಂತರ ರೂ. ನಷ್ಟ

ಕುಂದಾಪುರ: ಇಲ್ಲಿನ ಚಿಕ್ಕನಸಾಲು ರಸ್ತೆಯಲ್ಲಿರುವ ಕಿರಾಣಿ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಚಿಕ್ಕನಸಾಲು ರಸ್ತೆಯಲ್ಲಿರುವ ಚಂದ್ರಶೇಖರ್ (ಚಂದ್ರಣ್ಣ) ಎಂಬುವರ ಕಿರಾಣಿ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಅಂಗಡಿಯಲ್ಲಿದ್ದ ಫ್ರಿಡ್ಜ್, ಕಪಾಟು, ಪೀಠೋಪಕರಣಗಳು ಹಾಗೂ ಕಿರಾಣಿ ಸಾಮಾನುಗಳು ಸಂಪೂರ್ಣ ಸುಟ್ಟು ಹೋಗಿದ್ದು 4 ರಿಂದ 5 ಲಕ್ಷ ರೂ.ನಷ್ಟ ಸಂಭವಿಸಿದೆ. ಚಂದ್ರಣ್ಣ ಬೆಳಗ್ಗೆ ಅಂಗಡಿ ಬಾಗಿಲನ್ನು ತೆರೆದು ದೇವರಿಗೆ ದೀಪ ಹಚ್ಚಿ ಸಮೀಪದ ದೇವಸ್ಥಾನಕ್ಕೆ ಹೋಗಿ ಬರುವಷ್ಟರೊಳಗೆ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದೆ. ಕುಂದಾಪುರ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಲಾಯಿತು.