ಜಿಲ್ಲೆ

ಹೈಪರ್ ಮಾರ್ಕೆಟ್‌ನಲ್ಲಿ ಬೆಂಕಿ ಅವಘಡ

Dakshina Kannada

ಮಂಗಳೂರು: ನಗರದ ಬಳ್ಳಾಲ್‌ಭಾಗ್ ಬಳಿ ಇರುವ ಫೀಲ್ಡ್ ಸ್ಟಾರ್ ಹೈಪರ್ ಮಾರ್ಕೆಟ್‌ನಲ್ಲಿ ಬುಧವಾರ ತಡರಾತ್ರಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಬಹುತೇಕ ಸೊತ್ತುಗಳು ಸುಟ್ಟು ಹೋಗಿವೆ.

ನೈಟ್ ಕರ್ಫ್ಯೂ ಕಾರಣ ರಾತ್ರಿ 9.30ರ ವೇಳೆಗೆ ಮಾಲೀಕರು ಹಾಗೂ ಸಿಬ್ಬಂದಿ ಮಳಿಗೆ ಬಂದ್ ಮಾಡಿದ್ದರು. 10.30ರ ವೇಳೆಗೆ ದಟ್ಟ ಹೊಗೆಯೊಂದಿಗೆ ಬೆಂಕಿಯ ಕೆನ್ನಾಲಿಗೆ ಹೊರ ಬರುತ್ತಿರುವುದನ್ನು ಕಂಡ ಸ್ಥಳೀಯ ಅಪಾರ್ಟ್‌ಮೆಂಟ್ ನಿವಾಸಿಗಳು ಮಳಿಗೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಪಾಂಡೇಶ್ವರ ಹಾಗೂ ಕದ್ರಿ ಅಗ್ನಿಶಾಮಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಸುಮಾರು ಎರಡೂವರೆ ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ಶಮನಗೊಳಿಸಿದರು.

ಮಳಿಗೆಯೊಳಗಿನ ಎಲ್ಲ ಎಸಿ, ವಿದ್ಯುತ್ ದೀಪಗಳನ್ನು ಬಂದ್ ಮಾಡಲಾಗಿತ್ತು. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂದು ಗೊತ್ತಾಗಿಲ್ಲ ಎಂದು ಮಳಿಗೆಯ ಸಿಬ್ಬಂದಿ ತಿಳಿಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಸೀಲಿಂಗ್ ಸುಟ್ಟು ಕೆಳಕ್ಕೆ ಬಿದ್ದ ಪರಿಣಾಮ ದಾಸ್ತಾನು ಇಟ್ಟಿದ್ದ ದಿನಸಿ ಸಾಮಗ್ರಿ, ಪ್ಲಾಸ್ಟಿಕ್ ಸೊತ್ತುಗಳಿಗೆ ಬೆಂಕಿ ತಗುಲಿ ಕ್ಷಣ ಮಾತ್ರದಲ್ಲಿ ಹರಡಿದೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಮುಖ್ಯ ಅಗ್ನಿಶಾಮಕ ಅಧಿಕಾರಿ ಜಿ.ತಿಪ್ಪೇಸ್ವಾಮಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮೊಹಮ್ಮದ್ ನವಾಜ್, ಪ್ರಭಾರ ಅಗ್ನಿಶಾಮಕ ಅಧಿಕಾರಿ ವಸಂತ್ ಕುಮಾರ್ ಮತ್ತು ಅಗ್ನಿಶಾಮಕದಳದ 25 ಕ್ಕೂ ಅಧಿಕ ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದರು.