ಜಿಲ್ಲೆ

ಮನ್ಮುಲ್ ಮೆಗಾ ಡೇರಿಯಲ್ಲಿ ಬೆಂಕಿ ಅವಘಡ

ರಾಜಣ್ಣ

ಮದ್ದೂರು: ತಾಲೂಕಿನ ಗೆಜ್ಜಲಗೆರೆಯ ಜಿಲ್ಲಾ ಹಾಲು ಒಕ್ಕೂಟ(ಮನ್‌ಮುಲ್)ದ ಆವರಣದಲ್ಲಿರುವ ಮೆಗಾ ಡೇರಿಯಲ್ಲಿ ಭಾನುವಾರ ಬೆಂಕಿ ಅವಘಡ ಸಂಭವಿಸಿದೆ. ಇದರಿಂದಾಗಿ ಸುಮಾರು ಒಂದು ಕೋಟಿ ರೂ. ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ. ಈ ಬೆಳವಣಿಗೆ ನಡುವೆ, ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ನಡೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.


ಮೆಗಾ ಡೇರಿಯಲ್ಲಿ ಬೆಳಗ್ಗೆ 7ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಅದರಂತೆ ಮದ್ದೂರು, ಮಂಡ್ಯ, ಮೈಸೂರು ಸೇರಿದಂತೆ ವಿವಿಧೆಡೆಯಿಂದ ಅಗ್ನಿಶಾಮಕ ದಳದ 7 ವಾಹನಗಳೊಂದಿಗೆ ಸ್ಥಳಕ್ಕಾಗಮಿಸಿದ ಸಿಬ್ಬಂದಿ, ಸುಮಾರು ಹೊತ್ತು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದಾಗ್ಯೂ ತುಪ್ಪ ಹಾಗೂ ಖೋವಾ ತಯಾರಿಕೆಗೆ ಬಳಸಬೇಕಿದ್ದ ಪ್ಯಾಕಿಂಗ್ ರಟ್ಟುಗಳು, ಕವರ್‌ಗಳು, ಎಲೆಕ್ಟ್ರಿಕಲ್ ವಸ್ತುಗಳು ಸೇರಿದಂತೆ ಹಲವಾರು ವಸ್ತುಗಳು ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.


270 ಕೋಟಿ ರೂ. ವೆಚ್ಚದ ಕಟ್ಟಡದಲ್ಲಿ ಅಧ್ವಾನ?: ಸಾಕಷ್ಟು ವಿವಾದ ಹಾಗೂ ತೀವ್ರ ವಿರೋಧದ ನಡುವೆಯೂ ಮೆಗಾ ಡೇರಿಯನ್ನು ಸ್ಥಾಪಿಸಲಾಯಿತು. ಕಳೆದ ಡಿಸೆಂಬರ್‌ನಲ್ಲಿ ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಈ ಡೇರಿಯನ್ನು ಉದ್ಘಾಟಿಸಿದರು. ಇಷ್ಟು ಕಡಿಮೆ ಅವಧಿಯಲ್ಲಿಯೇ 270 ಕೋಟಿ ರೂ. ವೆಚ್ಚದ ಕಟ್ಟಡ ಬೆಂಕಿಗಾಹುತಿಯಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಜತೆಗೆ, ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎನ್ನುವ ಮಾಹಿತಿಯನ್ನು ಆಡಳಿತ ಮಂಡಳಿ ನೀಡಿದೆಯಾದರೂ ಹೊಸ ಕಟ್ಟಡದಲ್ಲಿ ಇದಕ್ಕೆಲ್ಲ ಸುರಕ್ಷತಾ ಕ್ರಮ ತೆಗೆದುಕೊಳ್ಳದಿರುವುದು ಪ್ರಶ್ನೆಯನ್ನು ಹುಟ್ಟುಹಾಕಿದೆ.


ಇದಕ್ಕೆ ಪೂರಕವೆಂಬಂತೆ ಕಟ್ಟಡಕ್ಕೆ ಸಂಬಂಧಿಸಿದಂತೆ ಅಗ್ನಿಶಾಮಕ ದಳದಿಂದ ಎನ್‌ಒಸಿಯನ್ನೇ ಪಡೆದಿಲ್ಲ ಎನ್ನುವ ಸಂಗತಿ ಹೊರಬಿದ್ದಿದೆ. ಘಟನಾ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಗ್ನಿಶಾಮಕ ದಳದ ಅಧಿಕಾರಿ ಕೆ.ಪಿ.ಗುರುರಾಜ್, ಎನ್‌ಒಸಿ ಮತ್ತು ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಕಟ್ಟಡ ನಿರ್ಮಾಣ ಮಾಡಿದ್ದಾರೆ. 2016ರ ನಿಯಮದಂತೆ ಯಾವುದೇ ಕಟ್ಟಡ ನಿರ್ಮಾಣಕ್ಕೂ ಮುನ್ನ ಎನ್‌ಒಸಿ ಪಡೆಯುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದರು.

ಗೌಪ್ಯತೆ ಕಾಪಾಡಿಕೊಂಡ ಆಡಳಿತ ಮಂಡಳಿ: ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದೆ. ಘಟನೆ ನಡೆದು ಸುಮಾರು ಹೊತ್ತು ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲವೆಂದು ತಿಳಿದುಬಂದಿದೆ. ಇದಲ್ಲದೆ, ಸ್ಥಳಕ್ಕೆ ತೆರಳಿದ ಸುದ್ದಿಗಾರರಿಗೂ ನಿಷೇಧ ವಿಧಿಸುವುದರ ಜತೆಗೆ ಚಿತ್ರೀಕರಣಕ್ಕೆ ತಡೆಯೊಡ್ಡಲಾಯಿತು.


ಆದರೆ ಸಿಬ್ಬಂದಿ ವರ್ತನೆಯಿಂದ ಕೋಪಗೊಂಡ ಸುದ್ದಿಗಾರರು ಮನ್‌ಮುಲ್ ಅಧ್ಯಕ್ಷ ಹಾಗೂ ಎಂಡಿ ಜತೆ ವಾಗ್ವಾದ ನಡೆಸಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಗ್ವಾದದ ನಂತರ ಕ್ಷಮೆ ಕೇಳಿದ ಅಧ್ಯಕ್ಷ ಮತ್ತು ಎಂಡಿ, ನಂತರ ವರದಿ ಮಾಡಲು ಮಾಧ್ಯಮಗಳನ್ನು ಒಳಗೆ ಬಿಟ್ಟರು. ಆದರೂ ಸುದ್ದಿಗಾರರನ್ನು ಒಳಗೆ ಪ್ರವೇಶಿಸಲು ಅಧ್ಯಕ್ಷರು ಹಾಗೂ ಎಂಡಿ ನಿರಾಕರಿಸಿದ್ದು ಏಕೆ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ.