ಜಿಲ್ಲೆ

ಮಾಜಿ ಸಚಿವ 'ರೇಣುಕಾಚಾರ್ಯ' ವಿರುದ್ಧ ಎಫ್ಐಆರ್ ದಾಖಲು| MP Renukacharya

ದಾವಣಗೆರೆ: ಗಣೇಶೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಡಿಜೆ ಬಳಕೆ ನಿಷೇಧಿಸಿದ್ದರೂ, ಆದೇಶದ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮತ್ತು ಅವರ ಬೆಂಬಲಿಗರ ವಿರುದ್ಧ ನಗರದ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾಧಿಕಾರಿಯ ಆದೇಶ ವಿರೋಧಿಸಿ ರೇಣುಕಾಚಾರ್ಯ ಅವರು ಕೆಲ ದಿನಗಳಿಂದ ನಿರಂತರವಾಗಿ ಜಿಲ್ಲಾಡಳಿತದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಬೆಂಬಲಿಗರೊಂದಿಗೆ ಸೇರಿ ಹಲವು ಬಾರಿ ಪ್ರತಿಭಟನೆಯನ್ನೂ ನಡೆಸಿದ್ದರು. ಸುಪ್ರೀಂ ಕೋರ್ಟ್ ಆದೇಶದಂತೆ ಜಿಲ್ಲಾಡಳಿತ ಹಾಗೂ ಪೊಲೀಸರು ಬೇರೆ ಧರ್ಮದವರಿಗೂ ಇಂಥದೇ ಷರತ್ತುಗಳನ್ನು ವಿಧಿಸಲಿ ಎಂದು ಸವಾಲು ಹಾಕಿದ್ದರು.

ಯುವಕರು ಡಿ.ಜೆ. ಬಳಸಿ, ತಾಕತ್ತಿದ್ದರೆ ಪೊಲೀಸರು, ಜಿಲ್ಲಾಡಳಿತ ಅದನ್ನು ತಡೆಯಲಿ ಎಂದು ರೇಣುಕಾಚಾರ್ಯ ಸವಾಲು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಶುಕ್ರವಾರ ರಾತ್ರಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಗಣೇಶೋತ್ಸವ ಹಾಗೂ ಈದ್ ಮಿಲಾದ್ ಮುಗಿಯುವವರೆಗೂ ಜಿಲ್ಲೆಯಾದ್ಯಂತ ಡಿ.ಜೆ ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.