ಕಬ್ಬು ತುಂಬಿದ ಟ್ರಾೃಕ್ಟರ್​. 
ಜಿಲ್ಲೆ

ವಾಹನ ಮಾಲೀಕರು, ಕಾರ್ಖಾನೆ ವಿರುದ್ಧವೂ ಎಫ್‌ಐಆರ್..!

ಬಾಗಲಕೋಟೆ: ಡಬಲ್ ಟ್ರೇಲರ್ ಅಳವಡಿಸಿ ಕಬ್ಬು ಸಾಗಿಸುವ ಟ್ರಾೃಕ್ಟರ್ ಚಾಲಕರು ಸಂಚಾರ ನಿಯಮ ಪಾಲಿಸಬೇಕು. ಜೊತೆಗೆ ವಾಹನಗಳಿಗೆ ರಿಫ್ಲೆಕ್ಟರ್​ ಅಳವಡಿಸಬೇಕು. ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿ, ಅಪಘಾತ ಉಂಟು ಮಾಡಿ ಸಾವು-ನೋವು ಸಂಭವಿಸಿದರೆ ಇನ್ನು ಮುಂದೆ ವಾಹನ ಮಾಲೀಕರು ಹಾಗೂ ಸಂಬಂಧಪಟ್ಟ ಸಕ್ಕರೆ ಕಾರ್ಖಾನೆ ವಿರುದ್ಧವೂ ಎಫ್‌ಐಆರ್ ಹಾಕಲು ಪೊಲೀಸರು ಮುಂದಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ 14 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಲು ಆರಂಭಿಸಲಿದ್ದು, ಪ್ರತಿ ಕಾರ್ಖಾನೆಯಿಂದಲೂ 1200 ರಿಂದ 1500 ಟ್ರಾೃಕ್ಟರ್‌ಗಳು ಕಬ್ಬು ಸಾಗಿಸುತ್ತವೆ. ಅನೇಕ ವಾಹನ ಚಾಲಕರು ರಸ್ತೆ ನಿಯಮ ಪಾಲನೆ ಮಾಡದೇ, ರಿಫ್ಲೆಕ್ಟರ್​  ಅಳವಡಿಸದೇ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುವುದರಿಂದ ವರ್ಷದಿಂದ ವರ್ಷಕ್ಕೆ ಅಪಘಾತಗಳು ಹಾಗೂ ಸಾವು ನೋವುಗಳು ಹೆಚ್ಚುತ್ತಿವೆ.

ಈ ಹಿನ್ನೆಲೆಯಲ್ಲಿ ಕಬ್ಬಿನ ಹಂಗಾಮಿನಲ್ಲಿ ಅಪಘಾತಗಳನ್ನು ನಿಯಂತ್ರಿಸಲು ಕಠಿಣ ಕ್ರಮ ಅನಿವಾರ್ಯವಾಗಿದೆ. ಹೀಗಾಗಿ ಆರಂಭದಿಂದಲೇ ನಿಯಮ ಪಾಲನೆಗೆ ಹೆಚ್ಚು ಒತ್ತು ಕೊಡಬೇಕು ಎಂದು ಈಗಾಗಲೇ ಪೊಲೀಸ್ ಇಲಾಖೆಯಿಂದ ಸಕ್ಕರೆ ಕಾರ್ಖಾನೆಗಳಿಗೆ ಮಾಹಿತಿ ನೀಡಲಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿಯೇ ಇತ್ತೀಚಿನ ವರ್ಷಗಳಲ್ಲಿ 400ಕ್ಕೂ ಅಧಿಕ ವಾಹನ ಅಪಘಾತಗಳು ಸಂಭವಿಸುತ್ತಿದ್ದು, ಅಷ್ಟೇ ಜನರು ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಕಬ್ಬಿನ ಸೀಜನ್ ಆರಂಭವಾದ ನವೆಂಬರ್ ತಿಂಗಳಿಂದ ಜನೆವರಿ ಅವಧಿಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತವೆ ಎಂದು ಪೊಲೀಸರು ಹೇಳುತ್ತಾರೆ.

ಪ್ರತಿ ತಿಂಗಳು ಸರಾಸರಿ 20 ರಿಂದ 30 ಜನರು ಅಪಘಾತದಲ್ಲಿ ಸಾವನ್ನಪ್ಪಿದರೆ ಕಬ್ಬಿನ ಸೀಜನ್‌ನ ಈ ಮೂರು ತಿಂಗಳು ಅವಧಿಯಲ್ಲಿ ಅದು ಸರಾಸರಿ 50ಕ್ಕೂ ಹೆಚ್ಚು ಇದೆ. ಇದರಲ್ಲಿ ಹೆಚ್ಚಾಗಿ ಬೈಕ್‌ಗಳು ಕಬ್ಬು ತುಂಬಿದ ಟ್ರಾೃಕ್ಟರ್ ನಡುವೆ ಅಪಘಾತ ಸಂಭವಿಸಿರುವುದು ಅಂಕಿ ಅಂಶಗಳಿಂದ ಗೊತ್ತಾಗುತ್ತದೆ. ಮುಖ್ಯವಾಗಿ ಹೆಚ್ಚಿನ ಟ್ರಾೃಕ್ಟರ್‌ಗಳು ಡಬಲ್ ಟ್ರೇಲರ್ ಇದ್ದು, ಹಿಂಭಾಗದಲ್ಲಿ ರಿಪ್ಲೆಕ್ಟರ್ ಅಳವಡಿಸದೇ ಇರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳುತ್ತಾರೆ.

ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಿ

ತಮ್ಮ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ತುಂಬಿಕೊಂಡು ಬರುವ ಟ್ರಾೃಕ್ಟರ್‌ಗಳಿಗೆ ರೇಡಿಯಂ ಹಚ್ಚಬೇಕು. ರೇಡಿಯಂ ಇಲ್ಲದ ವಾಹನಗಳನ್ನು ಕಬ್ಬು ಸಾಗಾಟಕ್ಕೆ ಕಾರ್ಖಾನೆಗಳು ಅವಕಾಶ ಕೊಡಬಾರದು. ಅಪಘಾತಗಳು ಹೆಚ್ಚಾಗಿ ಬೆಳಗಿನ ಜಾವ 3 ರಿಂದ 5 ಗಂಟೆ ಹೊತ್ತಿನಲ್ಲಿ ಜಾಸ್ತಿ ಆಗುತ್ತವೆ. ಟ್ರಾೃಕ್ಟರ್‌ಗಳು ರ್ಲಿೆಕ್ಟರ್ ಹಾಕದೇ ರಸ್ತೆಯಲ್ಲಿ ವಾಹನ ನಿಲ್ಲಿಸಿರುತ್ತಾರೆ. ಆ ವೇಳೆ ಬರುವ ಬೈಕ್ ಸವಾರರಿಗೆ ವಾಹನ ನಿಂತಿದ್ದು ಗೊತ್ತಾಗದೇ ಟ್ರಾೃಕ್ಟರ್‌ಗಳಿಗೆ ಗುದ್ದಿ ಸಾವು-ನೋವು ಅನುಭವಿಸುತ್ತಿದ್ದಾರೆ. ಇದರಿಂದ ಈಗ ಕಾರ್ಖಾನೆಗಳು ಆರಂಭವಾಗುತ್ತಿದ್ದು, ವಾಹನ ಚಾಲಕರಿಗೆ ಮುಂಜಾಗೃತ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.

ರಿಫ್ಲೆಕ್ಟರ್​ ಇಲ್ಲದ ವಾಹನ ನಿಲ್ಲಿಸುವ ಎಚ್ಚರಿಕೆ

ಕಬ್ಬು ತುಂಬಿಕೊಂಡು ಸಂಚರಿಸುವ ಟ್ರಾೃಕ್ಟರ್ ಗಳು ರಿಫ್ಲೆಕ್ಟರ್​ ಹಾಕದೇ ಚಲಾಯಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದರೆ ಆ ವಾಹನವನ್ನು ಎಲ್ಲಿ ಇರುತ್ತದೆಯೋ ಅಲ್ಲಿಯೇ ನಿಲ್ಲಿಸಲಾಗುವುದು. ರ್ಲಿೆಕ್ಟರ್ ಅಳವಡಿಸಿದ ಬಳಿಕವೇ ವಾಹನ ಬಿಡಲಾಗುವುದು. ಮುಂಜಾಗೃತ ಕ್ರಮ ಇಲ್ಲದೇ ಅಪಘಾತ ಸಂಭವಿಸಿ ಸಾವು-ನೋವು ಉಂಟಾದರೆ ಚಾಲಕರ ಜೊತೆಗೆ ವಾಹನ ಮಾಲೀಕರು ಹಾಗೂ ಆ ಕಬ್ಬು ಯಾವ ಕಾರ್ಖಾನೆಗೆ ಹೋಗುತ್ತದೆಯೋ ಆ ಕಾರ್ಖಾನೆ ಮೇಲೂ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕಬ್ಬಿನ ಸೀಜನ್‌ನಲ್ಲಿ ಅಪಘಾತಗಳು ಹೆಚ್ಚಿರುವುದು ಕಳೆದ ನಾಲ್ಕೈದು ವರ್ಷಗಳ ಅಂಕಿ ಅಂಶಗಳು ಹೇಳುತ್ತವೆ. ಹೀಗಾಗಿ ಸಂಚಾರ ನಿಯಮ ಹಾಗೂ ರಿಫ್ಲೆಕ್ಟರ್​ ಅಳವಡಿಸುವುದು ಕಡ್ಡಾಯ. ಈ ಬಗ್ಗೆ ಕಾರ್ಖಾನೆಯವರ ಗಮನಕ್ಕೂ ತರಲಾಗಿದೆ. ಹಾಗೆಯೆ ಬೈಕ್ ಸವಾರರು ಎಚ್ಚರಿಕೆಯಿಂದ ಕಡಿಮೆ ವೇಗದಲ್ಲಿ ವಾಹನ ಓಡಿಸಬೇಕು. ಇದರಿಂದ ಅಪಘಾತ, ಸಾವು-ನೋವು ನಿಯಂತ್ರಿಸಲು ಸಹಕರಿಸಬೇಕು. ರ್ಲಿೆಕ್ಟರ್ ಇಲ್ಲದೇ ವಾಹನ ಚಲಾಯಿಸಿದರೆ ವಾಹನ ಮಾಲೀಕರು ಹಾಗೂ ಕಾರ್ಖಾನೆ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗುವುದು. -ಅಮರನಾಥ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಾಗಲಕೋಟೆ.