ಜಿಲ್ಲೆ

ಜೀನಿ ಕಂಪನಿ ಮಾಲೀಕನ ವಿರುದ್ಧ ಎಫ್ಐಆರ್

ತುಮಕೂರು: ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆ ಜೀನಿ ಕಂಪನಿ ಮಾಲೀಕ ದಿಲೀಪ್​ ಕುಮಾರ್​ ವಿರುದ್ಧ ಕಳ್ಳಂಬೆಳ್ಳ ಠಾಣೆಯಲ್ಲಿ ಗುರುವಾರ ಎಫ್ಐಆರ್​ ದಾಖಲಾಗಿದೆ.

ಶಿರಾ ತಾಲೂಕಿನ ಯರಗುಂಟೆ ಗ್ರಾಮದ ಜೀನಿ ಕಂಪನಿಯಲ್ಲಿ 10 ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ ಮಹಿಳೆಯೋರ್ವರು ತನಗೆ ಕಂಪನಿ ಮಾಲೀಕ ದಿಲೀಪ್​ ಕುಮಾರ್​ ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಎ್​ಐಆರ್​ ದಾಖಲಿಸಿದ್ದಾರೆ.

6 ತಿಂಗಳಿನಿಂದ ಕಿರುಕುಳ: ಕಳೆದ 6 ತಿಂಗಳಿನಿಂದ ಕೆಲಸದ ವೇಳೆ ಕಂಪನಿ ಮಾಲೀಕ ದಿಲೀಪ್​ ಕುಮಾರ್​ ತನ್ನನ್ನು ಮೈ-ಕೈ ಮುಟ್ಟಿ ಮಾತನಾಡಿಸುವುದಲ್ಲದೆ ಅಸಭ್ಯವಾಗಿ ವರ್ತಿಸುತ್ತಿದ್ದರು. ತಾನು ಮದುವೆಯಾಗಿದ್ದು ಈ ರೀತಿ ನಡವಳಿಕೆ ಸರಿಯಲ್ಲ ಎಂದು ಖಂಡಿಸಿರುವುದಾಗಿ ದೂರಿರುವ ಮಹಿಳೆ, ಏ.19 ರಂದು ಯಾರು ಇಲ್ಲದ ಶೆಡ್​ನಲ್ಲಿ ನನ್ನ ಎಳೆದಾಡಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದು ಸಹಕರಿಸಿದಿದ್ದರೆ ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಕೆಯೊಡ್ಡಿದ್ದಾಗಿ ಗಂಭೀರ ಆರೋಪ ವೆಸಗಿದ್ದಾರೆ.

ಕಳ್ಳಂಬೆಳ್ಳ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ದಿಲೀಪ್​ ಕುಮಾರ್​ ತಲೆಮರೆಸಿಕೊಂಡಿದ್ದಾರೆ.

ನನ್ನ ತೇಜೋವಧೆಗೆ ಈ ರೀತಿ ಮಹಿಳೆಯ ಕೈಯಲ್ಲಿ ದೂರು ಕೊಡಿಸಲಾಗಿದೆ. ರಾಜಕೀಯ ಪಿತೂರಿ ಹಿನ್ನೆಲೆ ಇಂತಹ ಆರೋಪ ಮಾಡಲಾಗಿದೆ. ಜೀನಿ ಕಂಪನಿಯಲ್ಲಿ 86 ಸಿಸಿ ಟಿವಿಗಳಿದ್ದು 15 ದಿನದ ಡಿವಿಆರ್​ ಕೊಡುತ್ತೀನಿ. ನನ್ನ ವಿರುದ್ಧದ ಆರೋಪ ಸಾಬೀತುಪಡಿಸಲಿ. ರಾಜಕೀಯ ಕ್ಷೇತ್ರಕ್ಕೆ ಕಾಲಿಡುತ್ತೇನೆಂದು ಇಂತಹ ಸುಳ್ಳು ಆರೋಪ ಹೊರಿಸಿದ್ದಾರೆ. ಹಾಗಾಗಿ, ರಾಜಕೀಯ ಕ್ಷೇತ್ರಕ್ಕೆ ಕಾಲಿಡುವುದು ನಿಶ್ಚಿತ. ದಿಲೀಪ್​ ಕುಮಾರ್​ ಜೀನಿ ಕಂಪನಿ ಮಾಲೀಕ