ಹನೂರು: ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ ಮಹಿಳೆಯೊಬ್ಬರ ಅಪಹರಣ ವಿಚಾರ ಸಂಬಂಧ ಶನಿವಾರ ನಾಲ್ವರ ವಿರುದ್ಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ಅಖಿಲಾ(22) ಅಪಹರಣಕ್ಕೊಳಗಾಗಿದ್ದ ಮಹಿಳೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗೀಜಗನ ದಾಸನದೊಡ್ಡಿ ಗ್ರಾಮದ ಪಾಪಣ್ಣ, ಮುನೇಶ್ ಹಾಗೂ ಇನ್ನಿಬ್ಬರ ಮೇಲೆ ದೂರು ದಾಖಲಾಗಿದೆ.
ಅಖಿಲಾ ಅವರ ತಂದೆ ಮನ್ನಾದ ಎಂಬುವರು ಕೂಲಿ ಕೆಲಸಕ್ಕೆ ಬರುತ್ತೇನೆಂದು ಹೇಳಿ ಇವರ ಬಳಿ ಹಣ ಪಡೆದಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ನಾಲ್ವರು ಜ.31ರಂದು ರಾತ್ರಿ 7.30ರಲ್ಲಿ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಅಖಿಲಾ ಅವರ ಮನೆಗೆ ಆಗಮಿಸಿ ತಂದೆಯನ್ನು ವಿಚಾರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಕಾರಿನಲ್ಲಿ ಅಖಿಲಾರನ್ನು ಕಿಡ್ನ್ಯಾಪ್ ಮಾಡಿದ್ದರು.
ಈ ಬಗ್ಗೆ ಮಾಹಿತಿ ತಿಳಿದ ಅಖಿಲಾ ಸಹೋದರ ಅಲೆಗ್ಸಾಂಡರ್ 112ಕ್ಕೆ ವಿಷಯ ತಿಳಿಸಿದ್ದಾರೆ. ಕಾರ್ಯಪ್ರವೃತ್ತರಾದ ಪೊಲೀಸರು ಅಖಿಲಾ ಅವರನ್ನು ಪತ್ತೆಹಚ್ಚಿ ರಕ್ಷಿಸಿ ಕರೆ ತಂದಿದ್ದಾರೆ ಎಂದು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದು, ಈ ಸಂಬಂಧ ನಾಲ್ವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಲೆಗ್ಸಾಂಡರ್ ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.