ಬೆಂಗಳೂರು:ಗೆರೆ ಅಳಿಸಿದ ಕಾರಣ ರಾಜ್ಯದ 80,577 ಪಡಿತರ ಚೀಟಿದಾರರಿಗೆ, ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ (ಬೆರಳಚ್ಚು) ಪಡೆಯದೆ ಆಹಾರ ಪದಾರ್ಥ ವಿತರಿಸುವ ಸೌಲಭ್ಯವನ್ನು ಸರ್ಕಾರ ಕಲ್ಪಿಸಿದೆ.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಹಾಗೂ ರಾಜ್ಯ ಸರ್ಕಾರದ "ಅನ್ನಭಾಗ್ಯ' ಯೋಜನೆಯಡಿ ತಲಾ 5 ಕೆ.ಜಿ.ಸೇರಿ ಒಟ್ಟು 10 ಕೆ.ಜಿ.ಅಕ್ಕಿಯನ್ನು ಬಿಪಿಎಲ್ನ ಪ್ರತಿ ಸದಸ್ಯನಿಗೆ,ಅಂತ್ಯೋದಯ ಕಾರ್ಡ್ಗೆ 35 ಕೆ.ಜಿ.ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳ ಮಾಲೀಕರು, ಬಿಪಿಎಲ್,ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಮುಖ್ಯಸ್ಥರೊಬ್ಬರ ಬಯೋಮೆಟ್ರಿಕ್ನಲ್ಲಿ ಬೆರಳಚ್ಚು ಪಡೆದು ಆಧಾರ್ ಓಟಿಪಿ ಮೂಲಕ ರೇಷನ್ ಹಂಚಿಕೆ ಮಾಡುವುದು ಕಡ್ಡಾಯ. ಆದರೆ, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕೆಲ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಮತ್ತು ಕೂಲಿಕಾರ್ಮಿಕರಿಗೆ ಬಯೋಮೆಟ್ರಿಕ್ನಲ್ಲಿ ಬೆರಳಚ್ಚು ಬರುತ್ತಿಲ್ಲ.ಅಂಥವರಿಗೆ ಬೆರಳಚ್ಚು ವಿನಾಯಿತಿ ನೀಡಿದ್ದು,ನ್ಯಾಯಬೆಲೆ ಅಂಗಡಿಯಲ್ಲಿ ಅಳವಡಿಸಿರುವ ಐರಿಸ್ ಸ್ಕ್ಯಾನರ್ನಲ್ಲಿ ಕಣ್ಣು ಸೆರೆ ಹಿಡಿದು ಅಕ್ಕಿ ವಿತರಿಸಲಾಗುತ್ತಿದೆ.
ಪಡಿತರ ಸಾಗಣೆಗೆ 601 ಕೋಟಿ ಖರ್ಚು: ಪಡಿತರ ಸಾಗಾಣಿಗೆ 2023-24ರಲ್ಲಿ 301 ಕೋಟಿ ರೂ ಮತ್ತು 2024&25ರಲ್ಲಿ 300 ಕೋಟಿ ರೂ. ಸೇರಿ ಒಟ್ಟು 601 ಕೋಟಿ ರೂ.ವ್ಯಯಿಸಲಾಗಿದೆ. 2024ರ ಏ.1ರಿಂದ 2025ರ ಫೆ.28ರವರೆಗೆ 8,427 ಕ್ವಿಂಟಾಲ್ ಅಕ್ಕಿ, 35 ಕ್ವಿಂಟಾಲ್ ರಾಗಿ, 341 ಕ್ವಿಂಟಾಲ್ ಗೋಧಿ, 222 ಕ್ವಿಂಟಾಲ್ ಬೇಳೆ, 505 ಕ್ವಿಂಟಾಲ್ ಜೋಳ, 53 ಕ್ವಿಂಟಾಲ್ ಸಕ್ಕರೆ ಸೇರಿ ಒಟ್ಟು 9,584 ಕ್ವಿಂಟಾಲ್ ಪಡಿತರ ಪದಾರ್ಥ ವಶಪಡಿಸಿಕೊಳ್ಳಲಾಗಿದೆ.2 ವರ್ಷಗಳಲ್ಲಿ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) ಆದೇಶ ಉಲ್ಲಂಘಿಸಿದ 428 ಪಡಿತರ ಅಂಗಡಿಗಳು ವಿರುದ್ಧ ಕೇಸ್ ದಾಖಲಿಸಲಾಗಿದೆ. ಬೀದರ್, ಗದಗ, ಮಂಡ್ಯ, ರಾಯಚೂರು, ಕೊಡಗು, ಬೆಂಗಳೂರಿನಲ್ಲಿ ಗೋದಾಮುಗಳಿಂದ ಪಡಿತರ ಸಾಗಾಣೆ ಮಾಡುವ ವೇಳೆ ಟೆಂಡರ್ನಲ್ಲಿ ನೋಂದಾಯಿಸದೆ ಇರವ ವಾಹನಗಳಲ್ಲಿ ಅಪಾರ ಪ್ರಮಾಣದಲ್ಲಿ ಪಡಿತರ ಸಾಗಿಸಿರುವುದು ಪತ್ತೆಯಾಗಿದೆ.
ತಿದ್ದುಪಡಿಗೆ ಅವಕಾಶ: 2025ರ ಜನವರಿಯಿಂದ ಪ್ರತಿ ನಿತ್ಯ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಬೆಂಗಳೂರು ಓನ್, ಕರ್ನಾಟಕ ಓನ್ ಮತ್ತು ಗ್ರಾಮ ಓನ್ನಲ್ಲಿ ಪಡಿತರ ಚೀಟಿಯಲ್ಲಿನ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.ಬಿಪಿಎಲ್, ಎಪಿಎಲ್ ಕಾರ್ಡ್ನಲ್ಲಿರುವ ಸದಸ್ಯರ ಹೆಸರು ಡಿಲೀಟ್, ಹೊಸ ಹೆಸರು ಸೇರ್ಪಡೆ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಕಾರ್ಡ್ ವಿಳಾಸ ಬದಲಾವಣೆ, ರೇಷನ್ ಕಾರ್ಡ್ಗೆ ಆಧಾರ್ ಜೋಡೆಣೆ( ಇಕೆವೈಸಿ) ಪ್ರಕ್ರಿಯೆ, ಅಕ್ಕಿ ಪಡೆಯುವ ನ್ಯಾಯಬೆಲೆ ಅಂಗಡಿಗಳ ವಿಳಾಸ ಬದಲಾವಣೆಗೆ ಅವಕಾಶ ಇದೆ. ಹೊಸ ಬಿಪಿಎಲ್, ಎಪಿಎಲ್ ಕಾರ್ಡ್ ನೀಡುವುದನ್ನು ಸದ್ಯ ಆಹಾರ ಇಲಾಖೆ ನಿಲ್ಲಿಸಿದೆ. ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಕಾರ್ಡ್ಗಾಗಿ ಹಿಂದೆ ಸಲ್ಲಿಸಿದ್ದ ಲಾಂತರ ಅರ್ಜಿಗಳು ವಿಲೇವಾರಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಸರ್ಕಾರದ ಅನುಮತಿ ಮೇರೆಗೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ,ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಮತ್ತು ಬುಡಕಟ್ಟು ಜನಾಂಗದವರಿಗೆ ಮಾತ್ರ ಹೊಸ ಬಿಪಿಎಲ್ ಮಂಜೂರು ಮಾಡಲಾಗುತ್ತಿದೆ.