ಕೋಲಾರ : ಜಿಲ್ಲೆಯಾದ್ಯಂತ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ರಾಗಿ ಫಸಲು ಕೊಯ್ಲು ಆರಂಭವಾಗಿದ್ದು, ಕರೊನಾತಂಕಕ್ಕೆ ಸೆಡ್ಡು ಹೊಡೆಯುವಂತೆ ಗ್ರಾಮೀಣ ಸೊಗಡಿನ ಸೊಬಗು ಹೆಚ್ಚಿಸಿದೆ.
ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮುಂಗಾರು ಮಳೆಯಾದ್ದರಿಂದ 1.02 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಗೆ 92,157 ಹೆಕ್ಟೇರ್ ಬಿತ್ತನೆ (ಶೇ 90.,4 ) ಆಗಿತ್ತು. ಜಿಲ್ಲೆಯ ಪ್ರಮುಖ ಆಹಾರ ಬೆಳೆಯಾದ ರಾಗಿ 68,505 ಹೆಕ್ಟೇರ್ ಗುರಿಗೆ 67,570 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿ ಶೇ.100ಕ್ಕಿಂತ ಹೆಚ್ಚು ಗುರಿ ಸಾಧಿಸಲಾಗಿದೆ.
ರಾಗಿ ತಳಿ: ರಾಗಿ ಮೂರೂವರೆ ತಿಂಗಳ ಬೆಳೆ. ಜೂನ್ ತಿಂಗಳ ಅರ್ಧಭಾಗದಿಂದ ಜುಲೈ ಅವಧಿಯಲ್ಲಿ ಬಿತ್ತನೆ ಮಾಡಿದ್ದ ಎಂಆರ್-6, ಎಂಆರ್-1 ಎನ್.-5, ಎಲ್-5 ತಳಿ ಕಟಾವಿಗೆ ಬಂದಿದೆ. ಈ ತಳಿಯ ರಾಗಿ ಹುಲ್ಲು ಹಾಗೂ ತೆನೆ ಎತ್ತರಕ್ಕೆ ಬೆಳೆಯುತ್ತದೆ. ತಡವಾಗಿ ಬಿತ್ತನೆ ಮಾಡಿದ ರೈತರು ಜಿಪಿ-28 ಇಂಡಾಫ್-5 ಇನ್ನಿತರ ಅಲ್ಪಾವಧಿ ತಳಿಯ ಬಿತ್ತನೆ ಮಾಡಿದ್ದು, ಹುಲ್ಲು ಗಿಡ್ಡದಾಗಿದ್ದರೂ ತೆನೆ ದಪ್ಪಕ್ಕಿರುತ್ತದೆ.
ಕಳೆದೆರಡು ವಾರಗಳ ಹಿಂದೆ ಸುರಿದ ಮಳೆಗೆ ರಾಗಿ ತೆನೆಗಳು ನೆಲಕ್ಕೊರಗಿದ್ದವು. ಬಲಿಯುವ ಹಂತದಲ್ಲಿದ್ದ ಪೈರನ್ನು ಒಟ್ಟುಗೂಡಿಸಿ ಗಂಟು ಹಾಕಿ ಫಸಲು ಉಳಿಸಿಕೊಳ್ಳುವ ಕಸರತ್ತು ನಡೆಸಿದ್ದರು. ಮಳೆ ಮುಂದುವರಿದರೆ ಭಾರಿ ನಷ್ಟ ಅನುಭವಿಸಬೇಕಿತ್ತು. ಅದೃಷ್ಟಕ್ಕೆ ಮಳೆ ಬಂದಿಲ್ಲ. ಇದೀಗ ಕೆಲವಡೆ ರಾಗಿ ತೆನೆ ಒಣಗಿ ಕಟಾವಿಗೆ ಬಂದಿದೆ.
ಕಟಾವು ಶುರು: ರಾಗಿ ತೆನೆ ಕೊಯ್ಲಿಗೆ ಕೂಲಿಯಾಳುಗಳ ಅಭಾವ ನೀಗಿಸಲು ರೈತರು ಕುಟುಂಬದ ಸದಸ್ಯರೊಂದಿಗೆ ಕಟಾವಿಗೆ ಮುಂದಾಗಿದ್ದಾರೆ. ಇನ್ನು ಕೆಲವು ಅಕ್ಕಪಕ್ಕದ ರೈತರು ಪರಸ್ಪರ ಸಹಕಾರ ಮನೋಭಾವದಿಂದ ಬದಲಿಯಾಗಿ ಕೊಯ್ಲು ಮಾಡಿಕೊಳ್ಳುತ್ತಿದ್ದಾರೆ. ಕೂಲಿಯಾಳುಗಳಿಗೆ ಒಬ್ಬರಿಗೆ ಒಂದು ಹೊತ್ತು ಊಟ ಹಾಗೂ 400 ರೂ. ಕೂಲಿ ನೀಡಿ ಕಟಾವು ಮಾಡಿಸುತ್ತಿದ್ದಾರೆ.
ಒಂದು ಎಕರೆಗಿಂತ ಹೆಚ್ಚು ಬೆಳೆ ಇಟ್ಟಿರುವ ರೈತರು ಕಟಾವು ಗುತ್ತಿಗೆ ನೀಡುತ್ತಿದ್ದಾರೆ. ಊಟ ನೀಡಿ ಎಕರೆಗೆ 5500ರಿಂದ 6000 ರೂ. ಕೂಲಿ ಹಾಗೂ ಪೈರು ಸಹಿತ ಕೊಯ್ಲಿಗೆ 12ರಿಂದ 14,000 ರೂ. ನೀಡಬೇಕಿದೆ.
ನವೆಂಬರ್ ಮೊದಲ ವಾರದಲ್ಲಿ ಭಾರಿ ಮಳೆಯಾಗುವ ಕುರಿತು ಹವಾಮಾನ ತಜ್ಞರು ಮುನ್ಸೂಚನೆ ನೀಡಿರುವುದರಿಂದ ಆತಂಕಗೊಂಡಿರುವ ರೈತರು ಕೂಲಿಗಾದರೂ ಸರಿ, ತೆನೆ ಕಟಾವು ಮಾಡಿ ಭದ್ರಪಡಿಸಿಕೊಂಡರೆ ಸಾಕೆಂಬ ಧಾವಂತದಲ್ಲಿದ್ದು, ಎಲ್ಲೆಡೆ ಫಸಲು ಕೊಯ್ಲಿನ ದೃಶ್ಯ ಗ್ರಾಮೀಣ ಸೊಗಡಿನ ಕಳೆ ಹೆಚ್ಚಿಸಿದೆ.
ಕೆಲ ಭಾಗದಲ್ಲಿ ತೆನೆ ಕಟಾವು ನಡೆಯುತ್ತಿದ್ದರೆ ಇನ್ನು ಕೆಲವಡೆ ಕಟಾವು ಮಾಡಿ ರಾಗಿ ಒಕ್ಕಣೆ ಕಾರ್ಯವೂ ಆರಂಭಗೊಂಡಿದೆ. ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಬಿತ್ತನೆಯಾಗಿರುವ ರಾಗಿ ಹೊಲದಲ್ಲಿ ಕಟಾವಿಗೆ ಇನ್ನೂ 15 ದಿನಗಳಾಗಬೇಕು. ಒಟ್ಟಾರೆ ಈ ವರ್ಷ ನವೆಂಬರ್ ತಿಂಗಳಾಂತ್ಯದೊಳಗೆ ಬಹುತೇಕ ರಾಗಿ ಹೊಲಗಳಲ್ಲಿ ಕಟಾವು ಕಾರ್ಯ ಮುಗಿಯುವ ಸಾಧ್ಯತೆ ಇದ್ದು, ಈ ಬಾರಿ ರೈತರು ಸಂಕ್ರಾಂತಿಗೆ ರಾಗಿ ಬಂಪರ್ ಫಸಲನ್ನು ಮನೆ ತುಂಬಿಸಿಕೊಳ್ಳುವ ತವಕದಲ್ಲಿದ್ದಾರೆ.
ಎರಡೂವರೆಗೆ ಎಕರೆಯಲ್ಲಿ ಬೆಳೆದಿದ್ದ ರಾಗಿ ಕಟಾವಿಗೆ ಬಂದಿದ್ದರಿಂದ ಆಳಿಗೆ 400 ರೂ. ಕೂಲಿ ನೀಡಿ ಕಟಾವು ಮಾಡಿಸಿ ಒಕ್ಕಣೆ ಕೆಲಸ ನಡೆಯುತ್ತಿದೆ. ಈ ಬಾರಿ ಉತ್ತಮ ಮಳೆಯಾದ್ದರಿಂದ ರಾಗಿ ಫಸಲು ಚೆನ್ನಾಗಿ ಬಂದಿದೆ. ಈ ಬಾರಿ ಮುಕ್ಕಾಲು ಎಕರೆ ಭತ್ತ ಬೆಳೆದಿದ್ದು, ತೆನೆ ಬಲಿಯುವ ಹಂತದಲ್ಲಿದೆ. ಗೋಪಾಲಪ್ಪ, ಗೊಟ್ಟಹಳ್ಳಿ ಕೋಲಾರ