ಜಿಲ್ಲೆ

ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ

ವೀರೇಶ ಸೌದ್ರಿ

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು ನಂಬರ್ ಪ್ಲೇಟ್ ಇಲ್ಲದ ಹಾಗೂ ದೋಷಪೂರಿತ ಪ್ಲೇಟ್ ಹೊಂದಿದ ವಾಹನ ಸವಾರರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಿದರು.

50ಕ್ಕೂ ಅಧಿಕ ಬೈಕ್‌ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದರಲ್ಲದೆ, ಕೂಡಲೇ ನಂಬರ್ ಪ್ಲೇಟ್ ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಶಿರಹಟ್ಟಿ ವೃತ್ತದ ಸಿಪಿಐ ನಾಗರಾಜ ಮಾಡಳ್ಳಿ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ನಾಗರಾಜ ಗಡದ, ಕ್ರೈಂ ವಿಭಾಗದ ಪಿಎಸ್‌ಐ ಟಿ.ಕೆ. ರಾಠೋಡ ನೇತೃತ್ವದಲ್ಲಿ ತಂಡ ರಚಿಸಿ ಪೊಲೀಸ್ ಸಿಬ್ಬಂದಿ ಹಾಗೂ ಹೋಮ್‌ಗಾರ್ಡಗಳು ಸಹಕಾರದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಪಟ್ಟಣದ ಎರಡು ಪ್ರಮುಖ ಜಾಗಗಳಲ್ಲಿ ಥರ್ಡ್-ಐ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಹೆಲ್ಮೆಟ್ ಇಲ್ಲದೆ, ಸೀಟ್ ಬೆಲ್ಟ್ ಹಾಕದ ವಾಹನ ಸವಾರರಿಗೆ ದಂಡ ವಿಧಿಸಲಾಗುತ್ತಿದೆ. ದಂಡ ಕಟ್ಟಿದವರು ಮತ್ತು ಇತರರು ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಇದೀಗ ಥರ್ಡ್ ಐಗೆ ಚಳ್ಳೆಹಣ್ಣು ತಿನ್ನಿಸುವ ನಿಟ್ಟಿನಲ್ಲಿ ನಂಬರ್ ಪ್ಲೇಟ್‌ನಲ್ಲಿ ಯಾವುದಾದರೂ ಒಂದು ನಂಬರ್‌ಗೆ ಟೇಪ್ ಹಚ್ಚಿ ಕಾಣದಂತೆ ಮಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಇಲಾಖೆ ಮುಂದಾಗಿದೆ.

ಮುಂದಿನ ದಿನಗಳಲ್ಲಿ ನೋಂದಣಿ ಸಂಖ್ಯೆ ಇಲ್ಲದ ತಪ್ಪು ನಂಬರ್ ಪ್ಲೇಟ್ ಹಾಗೂ ನಂಬರ್ ಮರೆಮಾಚುವ ಸ್ಟಿಕರ್ ಅಂಟಿಸಿರುವುದು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಸುಗಮ ಸಂಚಾರ ಬಗ್ಗೆ ತಿಳಿವಳಿಕೆ ಮೂಡಿಸಲಾಗುವುದು ಎಂದು ಸಿಪಿಐ ಮತ್ತು ಪಿಎಸ್‌ಐ ಹೇಳಿದರು.