ಚನ್ನರಾಯಪಟ್ಟಣದಲ್ಲಿನ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿದರು. ಜಿ.ಎಸ್. ಶಂಕರಪ್ಪ, ಜಿ.ಆರ್. ಹರೀಶ್, ಸಿ.ಎನ್. ಮೋಹನ್, ಲೋಕೇಶ್ ಹಡೇನಹಳ್ಳಿ, ಎಚ್.ಎನ್.ದೀಪಾ, ಕೆ.ಎನ್.ಅನಿಲ್ ಇತರರು ಇದ್ದರು. 
ಜಿಲ್ಲೆ

ಕನ್ನಡ ನಾಮಫಲಕಗಳನ್ನು ಅಳವಡಿಸದಿದ್ದಲ್ಲಿ ದಂಡ

ಲೋಕೇಶ್ ಮನು. ಡಿ

ಚನ್ನರಾಯಪಟ್ಟಣ: ಕನ್ನಡ ನಾಡ ಹಬ್ಬ ರಾಜ್ಯೋತ್ಸವದ ವೇಳೆಗೆ ಎಲ್ಲ ವಾಣಿಜ್ಯ ಮಳಿಗೆ, ಅಂಗಡಿ-ಮುಗ್ಗಟ್ಟುಗಳು ಕನ್ನಡ ನಾಮಫಲಕಗಳನ್ನು ಅಳವಡಿಸದಿದ್ದಲ್ಲಿ ಪುರಸಭಾ ವತಿಯಿಂದ ಪರವ್ನಾಗಿ ನವೀಕರಿಸದೆ ದಂಡ ವಿಧಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಎಚ್ಚರಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕನ್ನಡ ನಾಡು-ನುಡಿ ಹಾಗೂ ನೆಲ-ಜಲದ ಗೌರವ ಹೆಚ್ಚಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಾಡು-ನುಡಿ, ಜಲ-ನೆಲ ರಕ್ಷಣೆಯ ಜತೆಗೆ ಕರ್ನಾಟಕದ ಭವ್ಯ ಸಂಸ್ಕೃತಿ, ಪರಂಪರೆ, ಇತಿಹಾಸ ಸ್ಮರಿಸಿ ಅದನ್ನು ಉಳಿಸಿಕೊಂಡು ನಾಡು ಕಟ್ಟುವ ಸಂಕಲ್ಪ ಮಾಡಿ. ಈ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುವುದು ಎಲ್ಲರ ಕರ್ತವ್ಯ ಎಂದರು.

ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಪುಸ್ತಕ ಹಾಗೂ ಹೂ ನೀಡಿ, ಅಭಿನಂದಿಸುವುದು ಹಾಗೂ ರಂಗಭೂಮಿ, ಸಾಹಿತ್ಯ, ಕೃಷಿ, ಕಲೆ, ಕ್ರೀಡೆ, ರಕ್ಷಣೆ, ಆರೋಗ್ಯ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು. ಎಲ್ಲೆಡೆ ಕನ್ನಡಧ್ವಜ ರಾರಾಜಿಸಬೇಕು. ಕಚೇರಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಪಟ್ಟಣದ ಪೊಲೀಸ್ ಠಾಣೆ ಎದುರಿನ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಭಾಗವಹಿಸುವ ಎಲ್ಲ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಹಾಗೂ ಉಪಹಾರ ಆಯೋಜನೆ ತೀರ್ಮಾನ ಕೈಗೊಳ್ಳಲಾಗಿದೆ. ಶಾಲಾ ಮಕ್ಕಳಿಂದ ಎರಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ನಂತರ ಕನ್ನಡ ನಾಡು, ನುಡಿ, ಸಂಸ್ಕೃತಿ ಬಿಂಬಿಸುವ ಸ್ತಬ್ದ ಚಿತ್ರಗಳು ಹಾಗೂ ಬೆಳ್ಳಿರಥದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರವನ್ನು ಪಟ್ಟಣದಲ್ಲಿ ಮೆರವಣಿಗೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಕನ್ನಡಪರ, ರೈತಪರ ಹಾಗೂ ವಿವಿಧ ಸಂಘಟನೆಗಳು ಮತ್ತು ತಾಲೂಕಿನ ಪ್ರತಿ ಇಲಾಖೆಯ ಅಧಿಕಾರಿಗಳು ಹಾಜರಿರಬೇಕು ಎಂದು ತಾಕೀತು ಮಾಡಿದರು.

ತಹಸೀಲ್ದಾರ್ ಜಿ.ಎಸ್. ಶಂಕರಪ್ಪ, ಮಾತನಾಡಿ, ರಾಜ್ಯೋತ್ಸವ ಆಚರಣೆ ಕುರಿತಾಗಿ ಸಿದ್ದಪಡಿಸಲಾಗಿರುವ ರೂಪರೇಷೆಯನ್ನು ಸಭೆಯ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ಸಿ.ಎನ್. ಮೋಹನ್, ಉಪಾಧ್ಯಕ್ಷೆ ಕವಿತಾ ರಾಜು, ಮುಖ್ಯಾಧಿಕಾರಿ ಆರ್.ಯತೀಶ್ ಕುಮಾರ್, ತಾಪಂ ಇಒ ಜಿ.ಆರ್.ಹರೀಶ್, ಬಿಇಒ ಎಚ್.ಎನ್.ದೀಪಾ, ಬಿಆರ್‌ಸಿ ಕೆ.ಎನ್.ಅನಿಲ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಟಿ.ಆನಂದ್, ಟಿಎಚ್‌ಒ ಡಾ.ಪಿ.ತೇಜಸ್ವಿನಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಆರ್.ತ್ಯಾಗರಾಜ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಭರತ್ ಗೌಡ, ಮಧುಕರ, ರಾಜಕುಮಾರ್, ರಾಜೇಶ್ ಕೆಂಚನಹಳ್ಳಿ, ಮಹಾದೇವ್, ಆನಂದ್ ಕಾಳೆನಹಳ್ಳಿ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.