ಜಿಲ್ಲೆ

ಸುಬ್ರಹ್ಮಣ್ಯದಲ್ಲಿ ಕಸ ಎಸೆದವರಿಗೆ ದಂಡ

ಸೌಮ್ಯ ಆರ್

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದಲ್ಲಿ ನೈರ್ಮಲ್ಯ ಕಾಪಾಡುವ ಪ್ರಯತ್ನಕ್ಕೆ ಪೂರಕವಾಗಿ ಕುಮಾರಧಾರಾ ಸೇತುವೆಯಿಂದ ನದಿಗೆ ಕಸ ಎಸೆದಾತಗೆ ಸೋಮವಾರ ದಂಡ ವಿಧಿಸಲಾಗಿದೆ.

ಸುಬ್ರಹ್ಮಣ್ಯ ಗ್ರಾಪಂ ಮತ್ತು ಸುಬ್ರಹ್ಮಣ್ಯ ಪೊಲೀಸರ ದಿಟ್ಟ ನಿರ್ಧಾರ ಕಸ ಎಸೆಯುವವರಿಗೆ ಎಚ್ಚರಿಕೆ ಗಂಟೆಯಾಯಿತು. ಕುಮಾರಧಾರಾ ನದಿಯ ಸೇತುವೆ ಮೇಲಿಂದ ನದಿಗೆ ವ್ಯಕ್ತಿಯೊಬ್ಬರು ಕಸ ಎಸೆದ ದೃಶ್ಯವನ್ನು ಸ್ಥಳೀಯ ಯುವಕ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದರು. ಈ ಮಾಹಿತಿ ತಕ್ಷಣವೇ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ನೀಡಲಾಯಿತು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಕುರಿತು ವಾಹನದ ವಿವರವನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ನೀಡಿದರು. ಪೊಲೀಸರು ವಾಹನ ಮಾಲೀಕರನ್ನು ಪತ್ತೆಹಚ್ಚಲು ನೆರವಾದರು. ನಂತರ ಗ್ರಾಮ ಪಂಚಾಯಿತಿ ಕಾನೂನು ಕ್ರಮ ಕೈಗೊಂಡು ಕಸ ಎಸೆದವರಿಗೆ ದಂಡ ವಿಧಿಸಿತು.

ಭಕ್ತರು ಹಾಗೂ ಸ್ಥಳೀಯರು ಪ್ಲಾಸ್ಟಿಕ್ ಅಥವಾ ಬೇರೆ ಯಾವುದೇ ಕಸವನ್ನು ನದಿ ನೀರಿಗೆ ಬಿಸಾಡುವುದು ತಪ್ಪು. ಇದು ಪರಿಸರ ಮಾಲಿನ್ಯ ಹೆಚ್ಚಿಸುವುದಲ್ಲದೆ ಕುಮಾರಧಾರಾ ನದಿಯ ಸ್ವಚ್ಛತೆಯನ್ನು ಹಾಳುಮಾಡುತ್ತದೆ. ಆದ್ದರಿಂದ ಕಸ ಎಸೆಯುವವರಿಗೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಲಾಗುವುದು ಎಂದು ಪಂಚಾಯಿತಿ ಅಧಿಕಾರಿಗಳು ಎಚ್ಚರಿಸಿದ್ದಾರೆ.