ಚಿಕ್ಕಬಳ್ಳಾಪುರ: ಎಚ್ಚರಿಕೆ ನೀಡುವುದು ಹಾಗೂ ದಂಡ ವಿಧಿಸಿರುವುದರ ನಡುವೆಯೂ ಅಪ್ರಾಪ್ತರಿಂದ ವಾಹನ ಚಾಲನೆ ನಿಂತಿಲ್ಲ. ಇದಕ್ಕೆ ಪೊಲೀಸರು ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಅದರಲ್ಲೂ ಗೌರಿಬಿದನೂರು ತಾಲೂಕೊಂದರಲ್ಲಿಯೇ ಅಪರಾಧ ಮತ್ತು ವಾಹನ ಕಾಯ್ದೆ ಉಲ್ಲಂಘನೆ ಪ್ರಕರಣಗಳಲ್ಲಿ ಕಳೆದ ಮೂರು ವರ್ಷದಲ್ಲಿ ಸ್ಥಳೀಯ ಪೊಲೀಸ್ ಠಾಣೆ ೩೬.೧೨ ಲಕ್ಷ ರೂ. ದಂಡ ವಸೂಲಿಯಾಗಿದೆ.
ವಾರ್ಷಿಕ ವರದಿ ಪ್ರಕಾರ ೨೦೨೩ನೇ ಸಾಲಿನಲ್ಲಿ ೪೧೭೩ ಪ್ರಕರಣ ದಾಖಲಿಸಿ ೧೪.೮೦ ಲಕ್ಷ ರೂ., ೨೦೨೪ರಲ್ಲಿ ೪೯೧೪ ಪ್ರರಣ ದಾಖಲಿಸಿ ೧೭.೮೦ ಲಕ್ಷ ರೂ. ಹಾಗೂ ೨೦೨೫ ರಲ್ಲಿ ಇನ್ನೂ ಅರ್ಧ ವರ್ಷ ಬಾಕಿ ಇರುವಾಗಲೇ ೨೨೭೭ ಪ್ರಕರಣ ದಾಖಲಿಸಿ ೩.೫೨ ಲಕ್ಷ ರೂ ದಂಡ ವಸೂಲಿ ಮಾಡಲಾಗಿದೆ.
*ಮಾಲೀಕರ ವಿರುದ್ಧ ದೂರು*
೧೮ ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನವರು ವಾಹನ ಚಲಾಯಿಸಿದ ಆರೋಪದ ಮೇಲೆ ಇದೇ ಮೊದಲ ಬಾರಿಗೆ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
ಜೂ.೧೭ ರಂದು ಸಂಜೆ ಗೌರಿಬಿದನೂರು ನಗರದಲ್ಲಿ ಪಿಎಸ್.ಐ ಗೋಪಾಲ್ ಹಾಗೂ ಸಿಬ್ಬಂದಿ ಗಸ್ತು ಕರ್ತವ್ಯದಲ್ಲಿದ್ದಾಗ ಅಂಬೇಡ್ಕರ್ ವೃತ್ತದ ಬಳಿ ಒಬ್ಬ ಅಪ್ರಾಪ್ತ ಬಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿಕೊಂಡು ಬಂದಿದ್ದು ಬೈಕ್ ನೀಡಿದ ವಾಹನದ ಮಾಲೀಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
*ಜನ ಜಾಗೃತಿ ಮನ್ನಣೆ*
೨೦೨೫ರ ಸಾಲಿನ ಮೊದಲಾರ್ಧದಲ್ಲಿ ಕೂಡ ಹೆಚ್ಚಿನ ಪ್ರಕರಣಗಳನ್ನು ದಾಖಲಿಸುವುದು ಮುಂದುವರಿದಿದೆ. ಹೆಲ್ಮೆಟ್ ಬಳಕೆ, ಸೀಟ್ ಬೆಲ್ಟ್ ಧರಿಸುವುದು, ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾವಣೆಗೆ ಅವಕಾಶ ನೀಡದಿರುವಂತೆ ಜನ ಜಾಗೃತಿ ಮೂಡಿಸಲು ಇಲಾಖೆ ಮನ್ನಣೆ ನೀಡುತ್ತಿದೆ. ಶಾಲೆ–ಕಾಲೇಜುಗಳಲ್ಲಿ ನೇರ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ ತಿಳಿಸಿದ್ದಾರೆ.