ಜಿಲ್ಲೆ

ನಿಯಮ ಉಲ್ಲಂಘಿಸಿದರೆ ದಂಡ, ಅಧಿಕಾರಿಗಳಿಗೆ ದ.ಕ. ಡಿಸಿ ಸೂಚನೆ

ಮಂಗಳೂರು: ಪ್ರತಿಯೊಬ್ಬರು ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದರಿಂದ ಸೋಂಕು ಪಸರಿಸುವುದನ್ನು ತಡೆಯಬಹುದು, ನಿಯಮಗಳ ಉಲ್ಲಂಘನೆಯಾದಲ್ಲಿ ಕಡ್ಡಾಯವಾಗಿ ದಂಡ ವಿಧಿಸಿ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ.ವಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬುಧವಾರ ಕೋವಿಡ್-19 ಮುಂಜಾಗೃತಾ ಕ್ರಮಗಳ ಕುರಿತು ಸಭೆ ನಡೆಸಿದ ಅವರು, ಕೋವಿಡ್ ಲಸಿಕೆ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಭಯ, ತಪ್ಪು ಕಲ್ಪನೆಯನ್ನು ಬಿಟ್ಟು, 45 ವರ್ಷಕ್ಕಿಂತ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದರು.

ಎಲ್ಲ ಕಲ್ಯಾಣ ಮಂಟಪಗಳ ಮುಖ್ಯಸ್ಥರು, ಸಭೆ, ಸಮಾವೇಶಗಳ ಆಯೋಜಕರು, ಫಾರ್ಮಸಿ ಅಸೋಸಿಯೇಷನ್, ಪೆಟ್ರೋಲ್ ಪಂಪ್ ಮಾಲೀಕರ ಸಂಘ, ಎಲ್ಲ ಟೋಲ್ ವ್ಯವಸ್ಥಾಪಕರು, ಅಮೆಜಾನ್/ಪ್ಲಿಫ್‌ಕಾರ್ಟ್ ಆನ್‌ಲೈನ್ ವಹಿವಾಟುದಾರರ ಮುಖ್ಯಸ್ಥರು, ಸ್ವಿಗ್ಗಿ ಮತ್ತು ಜೊಮ್ಯಾಟೋ ಸೇವಾ ಪೂರೈಕೆದಾರರ ಸಂಘಗಳ ಪ್ರಮುಖರು ತಮ್ಮ ಕೆಲಸಗಾರರು ಹಾಗೂ ಸಿಬ್ಬಂದಿಗೆ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಬೇಕು. ತಪ್ಪಿದ್ದಲ್ಲಿ ಅಂತಹ ಮಾಲೀಕರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಕೇರಳ ರಾಜ್ಯದಿಂದ ಜಿಲ್ಲೆಗೆ ಹೋಟೆಲ್ ಹಾಗೂ ಅಂಗಡಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಕೆಲಸ ಮಾಡುವವರು ಆಗಮಿಸುತ್ತಿದ್ದು, ಅವರ ಕೋವಿಡ್ ಪರೀಕ್ಷೆ ಮಾಡಿಸುವುದರೊಂದಿಗೆ ನೆಗೆಟಿವ್ ರಿಪೋರ್ಟ್ ತೆಗೆದುಕೊಂಡು ಬರುವಂತೆ ಆಯಾ ಹೊಟೇಲ್ ಹಾಗೂ ಅಂಗಡಿ ಮಾಲೀಕರು ನಿಗಾ ವಹಿಸಬೇಕು ಹಾಗೂ ಲಾಡ್ಜ್‌ಗಳಿಗೆ ಆಗಮಿಸುವವರ ವಿವರವನ್ನು ಕಡ್ಡಾಯವಾಗಿ ನೋಂದಣಿ ಪುಸ್ತಕದಲ್ಲಿ ನಮೂದಿಸುವಂತೆ ಸೂಚಿಸಿದರು.

ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಂದ ಹಣ ಪಡೆಯುವ ಸಂದರ್ಭ ಮಾಸ್ಕ್, ಕೈಗವಸು ಧರಿಸಿರಬೇಕು ಹಾಗೂ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಹೊಂದಿರಬೇಕು ಎಂದರು.

ಸಭೆ ಸಮಾರಂಭಗಳು, ಕನ್ವೆನ್ಶನ್ ಹಾಲ್‌ಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ಹೆಚ್ಚು ಜನ ಸೇರಬಾರದು. ಸಮಾರಂಭ ನಡೆಸುವ ಮುನ್ನ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪತ್ರ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಮಹಾನಗರ ಪಾಲಿಕೆ ಆಯುಕ್ತ ದಿನೇಶ್ ಕುಮಾರ್ ಹಾಜರಿದ್ದರು.