ವಿರಾಜಪೇಟೆ: ಪುರಸಭೆ ವ್ಯಾಪ್ತಿಯಲ್ಲಿ ಕಸ ಎಸೆಯಲು ಯತ್ನಿಸಿದ ವ್ಯಕ್ತಿಗೆ ಪುರಸಭೆ ವತಿಯಿಂದ ಇತ್ತೀಚೆಗೆ ಒಂದು ಸಾವಿರ ರೂ. ದಂಡ ವಿಧಿಸಲಾಗಿದೆ.
ನಗರವನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ನಗರದ ವಿವಿಧಡೆ ತ್ಯಾಜ್ಯವನ್ನು ಹಾಕುತ್ತಿದ್ದ ಸ್ಥಳಗಳಲ್ಲಿ ಪುರಸಭೆ ವಿವಿಧ ರೀತಿಯ ಗಿಡಗಳನ್ನು ಇಟ್ಟು ಸ್ವಚ್ಛತೆಯ ಅರಿವನ್ನು ಮೂಡಿಸಿತ್ತು. ಆ ಮೂಲಕ ಕ್ಲೀನ್ ವಿರಾಜಪೇಟೆ ಎಂಬ ಫೇಸ್‌ಬುಕ್ ಖಾತೆ ಆರಂಭಿಸಲಾಗಿತ್ತು.
ರಸ್ತೆ ಅಥವಾ ಇತರ ಸ್ಥಳಗಳಲ್ಲಿ ಯಾರಾದರೂ ಕಸ ಎಸೆಯುವುದು ಕಂಡು ಬಂದರೆ ಅಂತಹವರ ಭಾವಚಿತ್ರವನ್ನು ಈ ಖಾತೆಗೆ ಟ್ಯಾಗ್ ಮಾಡಲು ತಿಳಿಸಲಾಗಿತ್ತು. ಜತೆಗೆ ಕಸ ಹಾಕುವವರಿಗೆ 1000 ರೂ. ದಂಡ ವಿಧಿಸುವ ಎಚ್ಚರಿಕೆ ನೀಡಿತ್ತು. ನಗರ ಪ್ರದೇಶದಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ಕಸವನ್ನು ಎಸೆಯಲು ಯತ್ನಿಸಿದ ವ್ಯಕ್ತಿಯ ಭಾವಚಿತ್ರವನ್ನು ಈ ಖಾತೆಗೆ ಟ್ಯಾಗ್ ಮಾಡಿ ಪುರಸಭೆ ಸಾವಿರ ರೂ. ದಂಡ ವಿಧಿಸಿದೆ.