ಸುನಿಲ್ ಪೊನ್ನೇಟಿ ಮಡಿಕೇರಿ:
ಎಲ್ಲೆಂದರಲ್ಲಿ ಕಸ ಎಸೆಯುವವರೇ ಎಚ್ಚರ.. ದಂಡದ ನೊಟೀಸ್ ನಿಮ್ಮ ಮನೆಗೇ ಬರಲಿದೆ. ಕಸದ ’ಹಾಟ್‌ಸ್ಪಾಟ್’ಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿಗಳಲ್ಲಿ ದಾಖಲಾಗುವ ’ಕಸವೀರ’ರನ್ನು ಗುರುತಿಸಿ ಅವರಿಂದ ದಂಡ ವಸೂಲಿಯನ್ನೂ ಮಾಡಲಾಗುವುದು. ಕುಶಾಲನಗರ ತಾಲೂಕು ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಒಂದು ವಾರ್ಡ್‌ನಲ್ಲಿ ನಡೆದಿರುವ ಈ ಪ್ರಯೋಗ ಯಶಸ್ವಿಯಾಗಿದ್ದು, ಪಂಚಾಯಿತಿಯ ಎಲ್ಲಾ ಭಾಗಕ್ಕೂ ವಿಸ್ತರಿಸುವ ಮೂಲಕ ಸ್ವಚ್ಛ ಗ್ರಾಮದ ಕನಸು ನನಸಾಗಿಸಲು ಪ್ರಯತ್ನ ನಡೆಯುತ್ತಿದೆ.
ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯಿತಿಗಳ ಪೈಕಿ ಒಂದಾಗಿರುವ ಕೂಡುಮಂಗಳೂರಿನಲ್ಲಿ ಕಸದ ಸಮಸ್ಯೆ ಬಗೆ ಹರಿಸಲು ಪಂಚಾಯಿತಿ ಆಡಳಿತ ಒಂದಿಲ್ಲೊಂದು ಕಸರತ್ತು ಮಾಡುತ್ತಲೇ ಬರುತ್ತಿದೆ. ಆದರೆ ಎಲ್ಲೆಂದರಲ್ಲಿ ಕಸ ಎಸೆಯುವ ಚಾಳಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಕಸ ಸಂಗ್ರಹಿಸುವ ವಾಹನ ಮನೆ ಮನೆಗೆ ತೆರಳಿದರೂ ಆ ವಾಹನಕ್ಕೆ ತಮ್ಮ ಮನೆ ತ್ಯಾಜ್ಯ ತಂದು ಸುರಿಯಲು ಇರುವ ಸೋಮಾರಿತನವೇ ಎಲ್ಲಾ ಸಮಸ್ಯೆಗಳಿಗೆ ಮೂಲವಾಗಿದೆ. ಮೂಲದಲ್ಲೇ ಒಣ ಕಸ ಮತ್ತು ಹಸಿ ಕಸ ವಿಂಗಡಿಸಿ ತಂದು ಕಸ ಸಂಗ್ರಹಿಸುವ ವಾಹನಕ್ಕೆ ಸುರಿಯಬೇಕು ಎಂದು ಸಾಕಷ್ಟು ಜಾಗೃತಿ ಮೂಡಿಸಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ.
ಸಂಜೆ ಗತ್ತಲು ಅಥವಾ ಜನ ಓಡಾಟ ಕಡಿಮೆ ಇರುವ ಸಮಯ ನೋಡಿಕೊಂಡು ವಾರ್ಡ್‌ಗಳ ನಿಗದಿತ ಜಾಗದಲ್ಲಿ ಮನೆಗಳ ತ್ಯಾಜ್ಯ ತಂದು ಸುರಿಯುವುದು ಹಿಂದಿನಿಂದಲೂ ರೂಢಿ ಆಗಿದೆ. ಇದರಿಂದ ಆಗುವ ದುಷ್ಪರಿಣಾಮಗಳು, ಸ್ವಚ್ಛ ಗ್ರಾಮ ಪರಿಕಲ್ಪನೆಗೆ ಉಂಟಾಗುವ ಅಡ್ಡಿ ಬಗ್ಗೆ ಜನಸಾಮಾನ್ಯರಿಗೆ ಎಷ್ಟು ಅರಿವು ಮೂಡಿಸಿದರೂ ಪ್ರಯೋಜನ ಮಾತ್ರ ಶೂನ್ಯ. ಇದರಿಂದ ಬೇಸತ್ತಿರುವ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಆಡಳಿತ ಸಿಕ್ಕಸಿಕ್ಕಲ್ಲಿ ಕಸ ಸುರಿಯುವವರ ವಿರುದ್ಧ ’ದಂಡ ಪ್ರಯೋಗ’ಕ್ಕೆ ಮುಂದಾಗಿದೆ. ’ನಿಮ್ಮ ಮನೆಯ ತ್ಯಾಜ್ಯವನ್ನು ಕಸ ಸಂಗ್ರಹಿಸುವ ವಾಹನಗಳಿಗೇ ಹಾಕಿ. ನಿಮ್ಮ ಮನಸ್ಸಿಗೆ ಬಂದಲ್ಲಿ ತಂದು ಸುರಿದರೆ ದಂಡ ಖಚಿತ’ ಎಂದು ಎಚ್ಚರಿಕೆ ನೀಡಿದರೂ ಹಳೆಯ ಚಾಳಿ ಮುಂದುವರಿಸುವವರ ಮೇಲೆ ಅನಿವಾರ್ಯವಾಗಿ ದಂಡ ಹಾಕಲಾಗುತ್ತಿದೆ.
ಸಿಕ್ಕ ಸಿಕ್ಕಲ್ಲಿ ಕಸ ಸುರಿಯುವುದಕ್ಕೆ ಕಡಿವಾಣ ಹಾಕಲು ಮೊದಲು ಪ್ರಾಯೋಗಿಕವಾಗಿ ಒಂದು ವಾರ್ಡ್ ಆಯ್ಕೆ ಮಾಡಿಕೊಂಡು ಅಲ್ಲಿ ಕಸ ಸುರಿಯುವ ನಿಗದಿತ ಜಾಗಕ್ಕೆ ಗ್ರೀನ್ ಮ್ಯಾಟ್ ಅಳವಡಿಸಲಾಯಿತು. ಆದರೂ ಇದರ ಮೇಲೆಯೇ ತಂದು ತ್ಯಾಜ್ಯ ಸುರಿಯಲಾಗಿದೆ. ಕೊನೆಗೆ ಸೂರ್ಯ ಶಕ್ತಿಯಿಂದ ಕಾರ್ಯಾಚರಿಸುವ ಪೋರ್ಟಬಲ್ ಸಿಸಿಟಿವಿಯನ್ನು ಇದೇ ಜಾಗದಲ್ಲಿ ಇಡಲಾಯಿತು. ’ಈ ಜಾಗದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಈ ಸ್ಥಳದ ಮೇಲೆ ಪಂಚಾಯತಿ ಸಿಬ್ಬಂದಿ ನೇರ ನಿಗಾ ಇಟ್ಟಿದ್ದಾರೆ’ ಎನ್ನುವ ಫಲಕವನ್ನೂ ಅಳವಡಿಸಲಾಯಿತು.
ಏಪ್ರಿಲ್ ಆರಂಭದಲ್ಲಿ ಇಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ನಂತರ ೨ ವಾರಗಳ ಕಾಲ ಇಲ್ಲಿ ಯಾರೂ ತ್ಯಾಜ್ಯ ಎಸೆದಿರಲಿಲ್ಲ. ಆದರೆ ಏ. ೧೭ರಂದು ಮಹಿಳೆಯೊಬ್ಬರು ಇಲ್ಲಿ ಬಂದು ಕಸ ಸುರಿದಿದ್ದಾರೆ. ಇವರನ್ನು ಗುರುತಿಸಿದ ಕೂಡುಮಂಗಳೂರು ಪಿಡಿಒ ದಂಡ ಕಟ್ಟುವಂತೆ ಮನೆ ಯಜಮಾನರಿಗೆ ನೇರವಾಗಿ ಏ.೨೦ ರಂದು ನೊಟೀಸ್ ಜಾರಿ ಮಾಡಿದ್ದಾರೆ.
’ಕೂಡುಮಂಗಳೂರು ಗ್ರಾಮ ಪಂಚಾಯ್ತಿಗೆ ಬರುವ ಬಸವನತ್ತೂರು ಗ್ರಾಮದ ಸಿದ್ದಪ್ಪ, ತಂದೆ ಹಣ್ಣೇ ಗೌಡ ಆದ ನಿಮಗೆ ಈ ಮೂಲಕ ತಿಳಿಸುವುದೇನೆಂದರೆ ನಿಮ್ಮ ಸೊಸೆ ದಿನಾಂಕ ೧೭/೦೪/೨೦೨೪ ರ ಸಂಜೆ ಅಂದಾಜು ೬.೦೦ ಗಂಟೆಗೆ ಬಸವನತ್ತೂರು ಗ್ರಾಮದ ಟಾ ಟಾ ಕಾಫಿ ವರ್ಕ್ಸ್ ಕಾಂಪೌಂಡ್ ಪಕ್ಕದಲ್ಲಿ ಕಸ ಹಾಕಬಾರದೆಂದು ಗ್ರೀನ್ ಮ್ಯಾಟ್ ಮತ್ತೆ ಸಿ ಸಿ ಕ್ಯಾಮೆರಾ ಅಳವಡಿಸಿದರೂ ಸಹ ಕಸವನ್ನು ಹಾಕಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುತ್ತದೆ. ಆದ್ದರಿಂದ ಈ ನೊಟೀಸ್ ತಲುಪಿದ ತಕ್ಷಣ ಸದರಿ ಸ್ಥಳದಲ್ಲಿ ಕಸ ಹಾಕಿದ್ದಕ್ಕೆ ೫೦೦ ರೂ. ದಂಡವನ್ನು ಪಾವತಿಬೇಕು. ಜತೆಗೆ ಸ್ಥಳದಲ್ಲಿ ಹಾಕಿರುವ ಕಸವನ್ನು ತಾವೇ ತೆರವುಗೊಳಿಸತಕ್ಕದ್ದು ತಪ್ಪಿದ್ದಲ್ಲಿ ತಮ್ಮ ನಲ್ಲಿ ಸಂಪರ್ಕವನ್ನು ಕಸವನ್ನು ವಿಲೇವಾರಿ ಮಾಡುವ ವರಗೆ ನಿಲುಗಡೆಗೊಳಿಸಲಾಗುವುದು ಮತ್ತು ತಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎನ್ನುವ ನೊಟೀಸ್ ಅನ್ನು ತಲುಪಿಸಲಾಗಿದೆ.
ಆದರೆ ಮೊದಲ ಬಾರಿಗೆ ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡಿದ್ದಕ್ಕೆ ರಿಯಾಯಿತಿ ನೀಡಿ ಮಂಗಳವಾರ (ಏ.೩೦) ೧೦೦ ರೂ. ದಂಡ ಕಟ್ಟಿಸಿಕೊಳ್ಳಲಾಗಿದೆ. ಮತ್ತೆ ಇದೇ ತಪ್ಪು ಮುಂದುವರಿಸಿದರೆ ೫೦೦ ರೂ. ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ. ಕಸ ಎಸೆದವರಿಗೆ ಏ. ೨೦ಕ್ಕೆ ನೊಟೀಸ್ ಜಾರಿ ಮಾಡಿದ ವಿಷಯ ವಾರ್ಡ್‌ನಲ್ಲಿ ಹರಡುತ್ತಿದ್ದಂತೆಯೇ ಹಿಂದೆ ಇಲ್ಲಿ ಮಾಡಿದ್ದ ಜಾಗೃತಿ ಕಾರ್ಯಕ್ರಮಗಳಿಗಿಂತಲೂ ಹೆಚ್ಚಿನ ಪರಿಣಾಮ ಬೀರಿದೆ. ನಂತರದ ದಿನಗಳಲ್ಲಿ ಇಲ್ಲಿ ಯಾರೂ ತ್ಯಾಜ್ಯ ತಂದು ಸುರಿದಿಲ್ಲ.