ಶಿವಮೊಗ್ಗ ಸಂಚಾರ ಪೊಲೀಸರು ಸ್ಮಾರ್ಟ್‌ಸಿಟಿಯ ಐಟಿಎಂಎಸ್ ಯೋಜನೆ ಮೂಲಕ ನಿಯಮ ಉಲ್ಲಂಘಿಸಿದ ವಾಹನಗಳ ಮೇಲೆ ನಿಗಾ ಇರಿಸಿದರು.  
ಜಿಲ್ಲೆ

ಸಂಚಾರ ನಿಯಮ ಉಲ್ಲಂಘಿಸಿದರೆ ಫೈನ್ ಫಿಕ್ಸ್

Shivamogga - Desk - Vinayakumar D B

ಶಿವಮೊಗ್ಗ: ಜಿಲ್ಲಾ ಪೊಲೀಸ್ ಪೊಲೀಸ್ ಇಲಾಖೆಯು ಸ್ಮಾರ್ಟ್‌ಸಿಟಿ ಸಹಯೋಗದೊಂದಿಗೆ ಶಿವಮೊಗ್ಗ ನಗರದಲ್ಲಿ ವಾಹನಗಳ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಲುವಾಗಿ ಬಿಗಿ ಕ್ರಮಗಳನ್ನು ಕೈಗೊಳ್ಳಲು ಸಜ್ಜಾಗಿದ್ದು ಆ.28ರಿಂದಲೇ ನಗರಾದ್ಯಂತ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದೇ ಆದಲ್ಲಿ ದಂಡ ನಿಶ್ಚಿತವಾಗಲಿದೆ.

ಇದುವರೆಗೆ ಪೊಲೀಸರೇ ರಸ್ತೆ ಬದಿ, ಪ್ರಮುಖ ವೃತ್ತಗಳಲ್ಲಿ ವಾಹನಗಳನ್ನು ತಡೆದು ತಪಾಸಣೆ ಮಾಡುತ್ತಿದ್ದರು. ಇನ್ಮುಂದೆ ನಗರಾದ್ಯಂತ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಸಿಸಿ ಕ್ಯಾಮರಾ ಕಣ್ಗಾವಲು ಇರಲಿದ್ದು ಸಂಚಾರ ನಿಯಮ ಪಾಲಿಸದಿದ್ದರೆ ಕೇಸ್ ಬೀಳುವುದು ಖಚಿತ. ವಾಹನ ಸವಾರರ ಮನೆ ಬಾಗಿಲಿಗೆ ಎರಡ್ಮೂರು ದಿನದಲ್ಲಿ ದಂಡದ ನೋಟಿಸ್ ಬರಲಿದೆ. ಜತೆಗೆ ಮೊಬೈಲ್‌ಗಳಿಗೆ ಮೆಸೇಜ್ ಕೂಡ ಬರಲಿದೆ.
ಶಿವಮೊಗ್ಗ ನಗರದ 13 ವೃತ್ತಗಳಲ್ಲಿ ಈಗಾಗಲೇ ಸಿಸಿ ಕ್ಯಾಮರಾ ಅಳವಡಿಸಿದ್ದು ಸಿಗ್ನಲ್ ಜಂಪ್, ಜೀಬ್ರಾ ಕ್ರಾಸ್ ದಾಟುವುದು, ಅತಿ ವೇಗವಾಗಿ ಚಲಿಸುವುದು, ವಾಹನ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡುವುದು, ತ್ರಿಬಲ್ ರೈಡಿಂಗ್, ಏಕಮುಖ ಸಂಚಾರದಲ್ಲಿ ಚಲಿಸುವುದು ಒಳಗೊಂಡಂತೆ ಸಂಚಾರ ನಿಯಮ ಪಾಲಿಸದಿದ್ದರೆ ಕಂಪ್ಯೂಟರೀಕೃತ ದಂಡದ ರಸೀದಿ ಮನೆಗೆ ಹುಡುಕಿಕೊಂಡು ಬರಲಿದೆ. ಈಗಾಗಲೇ 100ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಿದ್ದು ಸ್ಮಾರ್ಟ್‌ಸಿಟಿಯ ಐಟಿಎಂಎಸ್(ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ) ಯೋಜನೆ ಮೂಲಕ ಪ್ರಮುಖ ವೃತ್ತಗಳು ಹಾಗೂ ಕೆಲ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ವಾರದಿಂದ ನಿರಂತರ ಜಾಗೃತಿ
ಆ.22ರಂದೇ ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸುವ ಪ್ರಕ್ರಿಯೆ ಬಗ್ಗೆ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿತ್ತು. ಅದಾದ ಬಳಿಕ ವಾರದಿಂದ ನಿರಂತರವಾಗಿ ಸಂಚಾರ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಕರಪತ್ರ, ವಿಡಿಯೋಗಳ ಮೂಲಕ ವಾಹನ ಸವಾರರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಪ್ರಮುಖ ವೃತ್ತಗಳಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಧ್ವನಿವರ್ಧಕಗಳ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾರೆ.