ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಬಾವಿಗಳ ನೀರು ಹಾಗೂ ಮಣ್ಣಿನ ಪರೀಕ್ಷೆ ನಡೆಸಿ ಕಲುಷಿತಗೊಳ್ಳಲು ಕಾರಣವಾದ ಅಂಶಗಳನ್ನು ಶ್ರೀವೇ ಪತ್ತೆ ಹಚ್ಚುವಂತೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜೂರು ಪರಿಸರದ 8 ಬಾವಿಗಳ ನೀರು ಕಲುಷಿತಗೊಂಡ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿ ಮಾತನಾಡಿದರು.
ನೀರಿನ ಬಣ್ಣ ಬದಲಾಗಿದ್ದು, ವಾಸನೆ ಬರುತ್ತಿದೆ. ವಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಅಂತರ್ಜಲ ಅಧಿಕಾರಿಗಳು ನೀರಿನ ವಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಇದರ ಮೂಲ ಮತ್ತು ಕಲುಷಿತಕ್ಕೆ ಕಾರಣಗಳೇನು ಎಂಬುದನ್ನು ತಿಳಿದುಕೊಂಡು ಕ್ರಮಕೈಗೊಳ್ಳಬೇಕು. ಜನರ ಆರೋಗ್ಯ ದೃಷ್ಟಿಯಿಂದ ಅರೋಗ್ಯ ಇಲಾಖೆ ನೀರಿನ ಪರೀಕ್ಷಾ ವರದಿ ಆಧರಿಸಿ ಬಾವಿಗಳ ನೀರು ಬಳಕೆಗೆ ಯೋಗ್ಯವಲ್ಲದಿದ್ದರೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದರು.
ತಹಸೀಲ್ದಾರ್ ಪ್ರತಿಭಾ ಆರ್. ಮಾತನಾಡಿ, ಮೇಲ್ನೋಟಕ್ಕೆ ನೀರಿನ ವಾಸನೆ ಮತ್ತು ಬಣ್ಣ ಬದಲಾಗಿದ್ದು ಕುಡಿಯಲು ಯೋಗ್ಯವಲ್ಲವೆಂದು ಕಂಡು ಬಂದಿದೆ. ಈ ಕುರಿತು ಅಂತರ್ಜಲ, ಪರಿಸರ ಹಾಗೂ ಆರೋಗ್ಯ ಇಲಾಖೆ ಕೂಲಂಕಷ ವರದಿ ನೀಡಬೇಕು ಎಂದರು.
ಮಜೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಆಚಾರ್ಯ, ತಾಲೂಕು ಅರೋಗ್ಯಧಿಕಾರಿ ಡಾ.ವಾಸುದೇವ, ವಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಪ್ರಮೀಳಾ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹರ್ಷಿತಾ, ಗ್ರಾಪಂ ಸದಸ್ಯರಾದ ಸಂದೀಪ್ ರಾವ್, ಜಿತೇಶ್, ಪಿಡಿಒ ವಿಲಾಸಿನಿ, ಕಾರ್ಯದರ್ಶಿ ಪ್ರಸಾದ್ ಭಂಡಾರಿ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕೃಷ್ಣಾ ರಾವ್ ಉಪಸ್ಥಿತರಿದ್ದರು.
ಕೆಲವೊಂದು ಬಾವಿಗಳಲ್ಲಿ ನೀರು ಹಳದಿ ಬಣ್ಣಕ್ಕೆ ತಿರುಗಿದ್ದು ವಾಸನೆ ಇರುವುದು ಕಂಡು ಬಂದಿದೆ. ನೀರಿನ ವಾದರಿ ಪರೀಕ್ಷಿಸಿದ ಬಳಿಕ ಅದರಲ್ಲಿರುವ ವ್ಯತ್ಯಾಸಗಳನ್ನು ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. -ಡಾ.ದಿನಕರ ಶೆಟ್ಟಿ, ಅಂತರ್ಜಲ ಇಲಾಖೆ ಹಿರಿಯ ಭೂವಿಜ್ಞಾನ ಅಧಿಕಾರಿ https://www.vijayavani.net/achieving-goals-through-planned-study https://www.vijayavani.net/locals-repaired-the-road-at-their-own-expense