ಹೊರ್ತಿ : ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕಾಗ ಸೇವೆಯಲ್ಲಿ ಭಗವಂತನನ್ನು ಕಾಣಬೇಕು ಎಂದು ಕಾತ್ರಾಳದ ಗುರುದೇವ ಆಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದರು.
ಸಮೀಪದ ದೇವರನಿಂಬರಗಿ ಗ್ರಾಮದಲ್ಲಿ ಚಡಚಣದ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯಂತಹ ಸಂಘಟನೆ ವಿದ್ಯಾರ್ಥಿಗಳಲ್ಲಿ ಸಾಮಾಜಿ ಕಳಕಳಿ ಹುಟ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ದೇವರನಿಂಬರಗಿಯಲ್ಲಿ ಒಂದು ವಾರ ಇದ್ದು ಗ್ರಾಮವನ್ನು ಸ್ವಚ್ಛಗೊಳಿಸಬೇಕು. ಗಿಡಗಳನ್ನು ನೆಡಬೇಕು ಮತ್ತು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣದ ಅವಶ್ಯಕತೆಯನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಜಾತ್ರೋತ್ಸವದಲ್ಲಿ ಸಚಿವ ಎಂ.ಬಿ. ಪಾಟೀಲರಿಗೆ ಸನ್ಮಾನಜಾತ್ರೋತ್ಸವದಲ್ಲಿ ಸಚಿವ ಎಂ.ಬಿ. ಪಾಟೀಲರಿಗೆ ಸನ್ಮಾನ
ದೇವರನಿಂಬರಗಿ ಗ್ರಾಪಂ ಅಧ್ಯಕ್ಷ ಭೀಮು ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಮನೋಜಕುಮಾರ ಕಟಗೇರಿ ಮಾತನಾಡಿದರು. ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ವಿ.ಎಸ್. ಗಿಡವೀರ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಂಸ್ಥೆಯ ನಿರ್ದೇಶಕ ಅಶೋಕ ಕುಲಕರ್ಣಿ, ನಿಂಬರಗಿ ಬಲಭೀಮ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಹಾಗೂ ಪಿಕೆಪಿಎಸ್ ಸದಸ್ಯರು, ಸೇವಾ ಯೋಜನೆಯ ಶಿಬಿರಾಧಿಕಾರಿ ಎಚ್.ಎಸ್. ಮಕಾಂದಾರ ಇತರರಿದ್ದರು.
ಉಪನ್ಯಾಸಕ ಬಸವರಾಜ ಅಂಕದ ಸ್ವಾಗತಿಸಿದರು. ಮಲ್ಲಿಕಾರ್ಜುನ ಅರಳಿಕಟ್ಟಿ ವಂದಿಸಿದರು. ಶ್ರೀಶೈಲ ಕಾಮಗೊಂಡ ನಿರೂಪಿಸಿದರು.