ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಇತ್ತೀಚಿನ ವರ್ಷಗಳಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಹೆಚ್ಚು ಆರ್ಥಿಕ ಆದಾಯ ತಂದುಕೊಡುತ್ತಿರುವ ನುಗ್ಗೆಕಾಯಿ ದರ ದಿಢೀರ್ ಕುಸಿತದಿಂದ ಬೆಳೆಗಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ತೋಟಗಾರಿಕೆ ಇಲಾಖೆಯೂ ನುಗ್ಗೆಕಾಯಿ ಬೆಳೆ ಬಗ್ಗೆ ರೈತರಲ್ಲಿ ಸಾಕಷ್ಟು ಅರಿವು ಮೂಡಿಸುತ್ತಿದೆ ಜತೆಗೆ ಮಾರ್ಗದರ್ಶನದ ಮೂಲಕ ಪ್ರೋತ್ಸಾಹ ನೀಡುತ್ತಿರುವುದರಿಂದ ಜಿಲ್ಲೆಯಲ್ಲಿ ನುಗ್ಗೆಕೃಷಿಗೆ ರೈತರು ಮುಂದಾಗಿದ್ದಾರೆ. ಕಳೆದ ನಾಲ್ಕೈದು ವರ್ಷದಲ್ಲಿ ನುಗ್ಗೆ ಬೆಳೆ ಸಾಕಷ್ಟು ವಿಸ್ತರಿಸುತ್ತಿದ್ದು ಆರ್ಥಿಕವಾಗಿ ರೈತರಿಗೆ ವರದಾನವಾಗಿದೆ. ಆದರೆ ಕಳೆದೊಂದು ತಿಂಗಳಿಂದ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಬೆಳೆಗಾರರಿಗೆ ಆತಂಕ ಮೂಡಿಸಿದೆ. ತಿಂಗಳ ಹಿಂದೆ 300 ರೂಪಾಯಿಷ್ಟು ಇದ್ದ ನುಗ್ಗೆಕಾಯಿ ಬೆಲೆ ದಿಢೀರ್ ಕುಸಿದ ಕಂಡಿದ್ದು 60 ರಿಂದ 70 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ ಸಾಗಾಣಿಕೆಯ ವೆಚ್ಚವೂ ವಾಪಸ್ ಸಿಗದಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಆಷಾಡ ಮಾಸದ ಎೆಕ್ಟ್: ಆಷಾಢ ಮಾಸದ ಕಾರಣ ಯಾವುದೇ ಮದುವೆ ಇತರೆ ಶುಭ ಕಾರ್ಯಕ್ರಮಗಳು ನಡೆಯದ ಹಿನ್ನೆಲೆಯಲ್ಲಿ ನುಗ್ಗೆಕಾಯಿ ಬೇಡಿಕೆ ಕಳೆದುಕೊಂಡಿತ್ತು. ಆದರೆ ಆಷಾಡ ಕಳೆದರೂ ನುಗ್ಗೆಕಾಯಿಗೆ ಬೇಡಿಕೆ ಕುದುರಿಲ್ಲ. ಶುಭ ಸಮಾರಂಭಗಳಲ್ಲಿ ಸಾಂಬಾರಿಗೆ ಪ್ರಮುಖವಾಗಿ ಬೇಕಾಗುತ್ತಿದ್ದ ನುಗ್ಗೆಕಾಯಿ ಕೇಳುವವರಿಲ್ಲದಂತಾಗಿದೆ ಎಂದು ಜಿಲ್ಲೆಯ ನುಗ್ಗೆಕಾಯಿ ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ ನಿರೀಕ್ಷೆಗೂ ಮೀರಿ ಮಾರುಕಟ್ಟೆಗೆ ನುಗ್ಗೆಕಾಯಿ ಬರುತ್ತಿರುವುದರಿಂದ ದರದಲ್ಲಿ ಕುಸಿದ ಕಂಡುಬರುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.
ತರಕಾರಿಗಳ ದರದಲ್ಲಿ ಏರಿಕೆ: ಭಾರಿ ಕುಸಿದ ಕಂಡಿದ್ದ ಟಮೋಟೋ ದರದಲ್ಲಿ ದಿಢೀರ್ ಏರಿಕೆ ಕಂಡಿದ್ದು ಬೆಳೆಗಾರರಲ್ಲಿ ನೆಮ್ಮದಿ ತಂದಿದೆ ಅದೇ ರೀತಿ ಇನ್ನಿತರ ತರಕಾರಿ ದರಗಳಲ್ಲೂ ದರ ಏರಿಕೆಯಾಗುತ್ತಿದೆ ಆದರೆ ನುಗ್ಗೆಕಾಯಿ ಬೆಲೆಯಲ್ಲಿ ಚೇತರಿಕೆ ಕಂಡುಬರುತ್ತಿಲ್ಲ. ಕೆಲವು ಕಡೆಗಳಲ್ಲಿ ಮಳೆಯಿಂದಾಗಿ ಇನ್ನಿತರ ತರಕಾರಿ ಸಲು ನೆಲಕಚ್ಚುವಂತಾಗಿದೆ. ಇದರಿಂದ ಮಾರುಕಟ್ಟೆಗಳಲ್ಲಿ ದರ ಏರಿಕೆಯಾಗಿದೆ ಆದರೆ ನುಗ್ಗೆಕಾಯಿ ಲಸು ಉತ್ತಮವಾಗಿದೆ, ದರ ಮಾತ್ರ ಸಿಗುತ್ತಿಲ್ಲ ಎಂಬುದು ಬೆಳೆಗಾರರ ನೋವಾಗಿದೆ.
ಔಷಧಿಯುಕ್ತ ತರಕಾರಿ: ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪು ಉತ್ತಮ ಔಷಧೀಯ ಗುಣಗಳ್ಳುಳ್ಳ ಕಾಯಿಪಲ್ಲೆಯಾಗಿರುವುದು ಇದರ ಬೇಡಿಕೆ ಹೆಚ್ಚಲು ಕಾರಣವಾಗಿದೆ, ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ನುಗ್ಗೆಕಾಯಿ ಬಳಸುವವರ ಸಂಖ್ಯೆ ಹೆಚ್ಚಿದೆ. ಇದು ಆರೋಗ್ಯವರ್ಧಕ ತರಕಾರಿಯಾಗಿದ್ದು ರುಚಿಕರವಾದ ಹುಳಿ ಅಥವಾ ಸಾರು ತಯಾರಿಸಬಹುದು. ನುಗ್ಗೆಕಾಯಿಯನ್ನು ಯಾವ ರೀತಿ ಸೇವಿಸಿದರೂ ಅದು ದೇಹಾರೋಗ್ಯವನ್ನು ಉತ್ತಮಪಡಿಸುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನುಗ್ಗೆ ಬೆಳೆಯಲು ರೈತರು ಆಸಕ್ತಿ ವಹಿಸುತ್ತಿದ್ದಾರೆ.
ವರ್ಷಕಾಲ ನುಗ್ಗೆಕಾಯಿಗೆ ಬೇಡಿಕೆ ಇರುತ್ತದೆ ಆದರೆ ಈ ಬಾರಿ ಆಷಾಡ ಆರಂಭವಾದ ಬಳಿಕ ದರದಲ್ಲಿ ಇಳಿಕೆ ಕಂಡುಬಂತು. ಪ್ರಸ್ತುತವೂ ದರದಲ್ಲಿ ಚೇತರಿಕೆ ಕಂಡುಬರುತ್ತಿಲ್ಲ. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ನಮಗೆ ನಷ್ಟ ಎದುರಿಸುವಂತಾಗಿದೆ. ಮಾರುಕಟ್ಟೆಗಳಲ್ಲಿ ನುಗ್ಗೆಕಾಯಿ ಕೇಳುವವರಿಲ್ಲದಂತಾಗಿದೆ.
ಶಿವಾನಂದ, ವ್ಯಾಪಾರಿ
------
ಈ ಬಾರಿ ಉತ್ತಮ ಮಳೆಯಿಂದಾಗಿ ಜಿಲ್ಲೆಯಲ್ಲಿ ನುಗ್ಗೆಕಾಯಿ ಉತ್ತಮ ಸಲು ಬಂದಿದೆ, ಆದರೆ ಮಾರುಕಟ್ಟೆಗಳಲ್ಲಿ ಬೇಡಿಕೆ ಇಲ್ಲದೆ ತೋಟದಲ್ಲೇ ಕಾಯಿ ಉಳಿಯುವಂತಾಗಿದೆ. ಕಾಯಿ ಕೀಳಿಸುವ ಕೂಲಿಗೂ ಸಾಕಾಗುವುದಿಲ್ಲ ಎಂಬ ಪರಿಸ್ಥಿತಿ ಇದೆ. ಉತ್ತಮ ಇಳುವರಿ ಇದ್ದರೂ ನಿರೀಕ್ಷಿತ ಲಾಭ ಇಲ್ಲದಂಥಾಗಿದೆ.
ನವೀನ, ನುಗ್ಗೆಕಾಯಿ ಬೆಳೆಗಾರ