ಮಂಡ್ಯ: ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ಹೊಂದಿರುವವರು ಆಗಾಗ್ಗೆ ವ್ಯವಹಾರ ಮಾಡಿದರೆ ಸರ್ಕಾರದ ಹಲವು ಯೋಜನೆಗಳ ಉಪಯೋಗದ ಜೊತೆಗೆ ಬ್ಯಾಂಕುಗಳ ಉಪಯೋಗವನ್ನು ಪಡೆದುಕೊಳ್ಳಲು ಸಾಧ್ಯ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್‌ಕುಮಾರ್ ಸಲಹೆ ನೀಡಿದರು.
ನಗರದ ಸರ್ಕಾರಿ ಮಹಿಳಾ ಕಾಲೇಜಿ(ಸ್ವಾಯತ್ತ)ನಲ್ಲಿ ಅರ್ಥಶಾಸ್ತ್ರ ವಿಭಾಗ ಹಾಗೂ ಲೀಡ್ ಬ್ಯಾಂಕ್ ವತಿಯಿಂದ ಬುಧವಾರ ಆಯೋಜಿಸಿದ್ದ ಹಣಕಾಸು ಸಾಕ್ಷರತಾ ಸಪ್ತಾಹದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 18 ಲಕ್ಷ ಜನಸಂಖ್ಯೆ ಇದ್ದಾರೆ. 54 ಲಕ್ಷ ಖಾತೆಗಳನ್ನು ಬ್ಯಾಂಕುಗಳಲ್ಲಿ ತೆರೆಯಲಾಗಿದೆ. ಜನ್‌ಧನ್ ಖಾತೆ ತೆರೆಯಲಾಗಿತ್ತಾದರೂ, ಹಲವಾರು ವರ್ಷಗಳಿಂದಲೂ ವ್ಯವಹಾರ ಮಾಡಿಲ್ಲ. ಇದರಿಂದಾಗಿ ಖಾತೆಗಳು ಮುಚ್ಚಿಹೋಗುವ ಸಾಧ್ಯತೆಗಳಿರುತ್ತವೆ. ತಕ್ಷಣ ಬ್ಯಾಂಕಿಗೆ ಆಧಾರ್ ಕಾರ್ಡ್ ಕೊಂಡೊಯ್ದು ಅವುಗಳನ್ನು ಮತ್ತೆ ಪ್ರಾರಂಭಿಸಬಹುದು ಎಂದು ಹೇಳಿದರು.
ಇತ್ತೀಚೆಗೆ ಸೈಬರ್ ಕ್ರೈಂಗಳು ಹೆಚ್ಚಾಗುತ್ತಿವೆ. ಪ್ರತೀ 15 ದಿನಗಳಿಗೊಮ್ಮೆ ಸೆಕ್ಯೂರಿಟಿ ಸೈಬರ್ ಪೊಲೀಸ್ ಇಲಾಖೆಯಿಂದ ಮಾಹಿತಿ ಬರುತ್ತಿವೆ. ಮೊಬೈಲ್‌ಗಳಲ್ಲಿ ಕೆಲವು ಆ್ಯಪ್‌ಗಳು ಸಿಗುತ್ತವೆ. ಅವುಗಳನ್ನು ಡೌನ್‌ಲೋಡ್ ಮಾಡಿದರೆ ಸಾಕು. ನಮ್ಮೆಲ್ಲ ಮಾಹಿತಿಯನ್ನೂ ಅವರು ಕಸಿದುಕೊಳ್ಳುತ್ತಾರೆ. ಜತೆಗೆ ಖಾತೆಯಲ್ಲಿದ್ದ ಹಣವನ್ನೂ ದೋಚುತ್ತಾರೆ. ಸಾಲ ಕೊಡುತ್ತೇವೆಂಬ ಆಮಿಷ ತೋರಿಸಿ 10 ಸಾವಿರ ರೂ ಸಾಲ ಕೊಡುತ್ತಾರೆ. ಕೊಡುವ ಹಣದಲ್ಲೂ 1 ಸಾವಿರ ರೂ ಇಟ್ಟುಕೊಂಡು 9 ಸಾವಿರ ರೂ ಕೊಡುತ್ತಾರೆ. ಅದಕ್ಕೆ ಶೇ.25 ರಿಂದ 36ರಷ್ಟು ಬಡ್ಡಿ ಹಾಕುತ್ತಾರೆ. ಇದಲ್ಲದೆ, ಸರ್ವೀಸ್ ಚಾರ್ಜ್ ಇತರೆ ಸಬೂಬು ಹೇಳಿ 10 ರಿಂದ 15 ಸಾವಿರ ರೂ ಹೆಚ್ಚುವರಿ ಹಣ ವಸೂಲಿ ಮಾಡುತ್ತಾರೆ. ಇಂತಹ ಸಾಲದ ಆ್ಯಪ್‌ಗಳನ್ನು ಬಳಸಬೇಡಿ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಹೇಮಲತಾ ಮಾತನಾಡಿ, ಮಹಿಳೆಯರು ಸಹ ಬ್ಯಾಂಕ್‌ಗಳ ವ್ಯವಹಾರಗಳನ್ನು ತಿಳಿದುಕೊಳ್ಳುವುದು ಅತ್ಯಾವಶ್ಯಕ. ಎಲ್ಲದ್ದಕ್ಕೂ ಪುರುಷರನ್ನು ಅವಲಂಬಿಸುವುದರಿಂದ ಒಂದೊಮ್ಮೆ ತೊಂದರೆಗೆ ಸಿಲುಕುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಬ್ಯಾಂಕ್ ಆಫ್ ಬರೋಡದ ವ್ಯವಸ್ಥಾಪಕ ಬಿ.ಪವನ್‌ಕುಮಾರ್, ಆರ್ಥಿಕ ಹಣಕಾಸು ವಿಭಾಗದ ಸಮಾಲೋಚಕಿ ಕೆ.ಪಿ.ಅರುಣಕುಮಾರಿ, ಕಾಲೇಜಿನ ಅರ್ಥಶಾಸ್ತ್ರ ವಿಷಯದ ಮುಖ್ಯಸ್ಥ ವರದರಾಜೇಗೌಡ, ಡಾ.ಲತಾ ಇತರರಿದ್ದರು.