ಶ್ರೀಪತಿ ಹೆಗಡೆ ಹಕ್ಲಾಡಿ ಹಳೇಅಗ್ರಹಾರ
ಅನ್ನ ಪ್ರಸಾದದಿಂದಲೇ ಹೆಸರು ಪಡೆದಿದ್ದ 900 ವರ್ಷ ಇತಿಹಾಸ ಹೊಂದಿರುವ ಬೈಂದೂರಿನ ಸೌಡ ಹಳೇ ಅಗ್ರಹಾರ ಶ್ರೀ ವೆಂಕಟರಮಣ ದೇವಸ್ಥಾನ ಇಂದು ಪಾಳು ಬಿದ ಸ್ಥಿತಿಯಲ್ಲಿದ್ದು, ಜೀರ್ಣೋದ್ದಾರ ಮರೀಚಿಕೆಯಾಗಿದೆ. ಒಂದು ಕಾಲದಲ್ಲಿ ವಿದ್ಯಾದೇಗುಲವಾಗಿ ಕಂಗೊಳಿಸಿ, ಮೊದಲ ಬಾರಿ ದೇವಸ್ಥಾನದಲ್ಲಿ ಅನ್ನಪ್ರಸಾದ ಆರಂಭಿಸಿದ್ದ ಕೀರ್ತಿ ಈ ದೇವಸ್ಥಾನದ್ದು. ಸದ್ಯ ದೇವಸ್ಥಾನ ಪಾಳು ಬಿದ್ದಿದೆ. ದೇವಾಲಯದ ಅಭಿವೃದ್ದಿಗೆ ಜೀರ್ಣೋದ್ಧಾರ ಸಮಿತಿ ರಚನೆಯಾಗಿ 5 ಕೋಟಿ ರೂ. ವೆಚ್ಚದಲ್ಲಿ ಪುನಃ ನಿರ್ಮಾಣ ಮಾಡುವ ಸಿದ್ಧ್ದತೆ ನಡೆದರೂ, ಹಣಕಾಸಿನ ಅಡಚಣೆ ತಲೆದೋರಿದೆ. ಅನಾದಿ ಕಾಲದಿಂದಲೂ ಭಕ್ತರ ಪ್ರೀತಿಯ ಅಕ್ಷರ ಜ್ಞಾನದ ವಿದ್ಯಾದೇಗುಲ, ನೂರಾರು ಜೋಡಿಗಳಿಗೆ ಕಂಕಣ ಭಾಗ್ಯ ನೀಡಿದ ದೇವಸ್ಥಾನವಿದು. ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕ್ಷೇತ್ರದಲ್ಲೇ ಈ ದೇವಳವಿದ್ದು, ಅವರು ಮನಸ್ಸು ಮಾಡಿದರೆ ಮರು ನಿರ್ಮಾಣ ಕಷ್ಟವಲ್ಲ ಎನ್ನುತ್ತಾರೆ ಕ್ಷೇತ್ರದ ಭಕ್ತರು. ಬೈಂದೂರು ತಾಲೂಕು ಶಂಕರನಾರಾಯಣ ಸಪ್ತಕ್ಷೇತ್ರದ ಮಗ್ಗುಲಲ್ಲೇ ಈ ದೇವಸ್ಥಾನವಿದೆ. ಸ್ವರ್ಣಲೇಪಿತ ಕಲಶ ದೇಗುಲದಲ್ಲಿದ್ದು, ಕಲಶಕ್ಕೆ ನಗರದ ಶಿವಪ್ಪ ನಾಯಕ ಚಿನ್ನ ಲೇಪನ ಮಾಡಿಸಿದ್ದಾನೆ. ಅಕ್ಷಯ ತದಿಗೆಯಂದು ನಡೆಯುವ ರಥೋತ್ಸವ ನೋಡಿದರೆ ಜೀವನ ಅಕ್ಷಯವಾಗುತ್ತದೆ ಎಂಬ ನಂಬಿಕೆ ಸೌಡ ಹಳೇ ಅಗ್ರಹಾರ ಶ್ರೀ ವೆಂಕಟರಮಣ ದೇವಸ್ಥಾನದ್ದು.
ಶಿವಗಂಗೆಗೆ ಉಪ್ಪುನೀರು ಬಂದರೆ ಮಳೆ
ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಸಾಂಬ ಸದಾಶಿವ ದೇವಸ್ಥಾನ ವಾರಾಹಿ ನದಿ ತಟದಲ್ಲಿದೆ. ಭಕ್ತರ ಸ್ನಾನಕ್ಕೆ, ದೇವಸ್ಥಾನಕ್ಕೆ ನೀರು ತರಲು ಹೊಳೆಗೆ ನಿರ್ಮಿಸಿದ ಮೆಟ್ಟಿಲು ಹಿಂದಿನವರ ಕೆಲಸ ಗಟ್ಟಿತನಕ್ಕೆ ಸಾಕ್ಷಿ. ಹಿಂದೆ ಸೌಡ ವ್ಯಾಪಾರ ಕೇಂದ್ರವಾಗಿದ್ದು, ಬಂದರು ಇತ್ತು. ವಾರಾಹಿ ನದಿಯಲ್ಲಿ ಶಿವಗಂಗೆ ಎಂಬ ಸ್ಥಳವಿದ್ದು, ಅಲ್ಲೊಂದು ಬಾವಿ ಇದೆ. ಅದರ ಆಳ ಎಷ್ಟು ಎಂದು ಕಂಡವರಿಲ್ಲ. ಸಮುದ್ರ ಹಿನ್ನೀರು ವಾರಾಹಿ ನದಿಗೂ ಬರುತ್ತಿದ್ದು, ಯಾವಾಗ ಶಿವಗಂಗೆ ಪರಿಸರಕ್ಕೆ ಉಪ್ಪು ನೀರು ಬರುತ್ತದೋ ಅಂದು ಮಳೆ ಬರುತ್ತದೆ ಎಂಬುದು ನಂಬಿಕೆ. ಆ ನಂಬಿಕೆ ಇಂದಿಗೂ ನಿಜವಾಗುತ್ತಿರುವುದು ಅಚ್ಚರಿ ಸಂಗತಿ.
ಅವನತಿಯ ಹಾದಿ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ಹಲ್ಸನಾಡು ಮನೆತನಕ್ಕೆ ದೇವಸ್ಥಾನ ಸೇರಿದ್ದರೂ, ತಸ್ತೀಕ್ ಸಿಗುತ್ತಿರುವುದರಿಂದ ಸರ್ಕಾರಿ ಆಡಳಿತಕ್ಕೊಳಪಟ್ಟಿದೆ. ಗರ್ಭಗುಡಿ ಶಿಲಾಮಯವಾಗಿದ್ದು, ದೇವಸ್ಥಾನದ ಹೆಬ್ಬಾಗಿಲು ಹಿಂದಿನ ವೈಭವ ಅಲ್ಪಸ್ವಲ್ಪ ಉಳಿಸಿಕೊಂಡಿದೆ. ಸುತ್ತು ಪೌಳಿ ಕುಸಿದು, ನೆಲಸಮವಾಗಿದೆ. ಶ್ರೀ ವೆಂಕಟರಮಣ ದೇವರು ಶ್ರೀದೇವಿ ಭೂದೇವಿ ಸಹಿತ ವಿರಾಜಮಾನವಾಗಿದೆ. ಅತ್ಯಂತ ತೆಳುವಾದ ಸಾಲಿಗ್ರಾಮ ಶಿಲೆಯಲ್ಲಿ ನಾಜೂಕಾಗಿ ಕೆತ್ತಲಾಗಿದೆ. ಉತ್ಸವಮೂರ್ತಿ ಶ್ರೀದೇವಿ ಭೂದೇವಿ ಸಹಿತ ಇದ್ದು, ಪ್ರಭಾವಳಿ ಕೂಡ ಪಂಚಲೋಹದಲ್ಲಿದ್ದು, ಪ್ರಭಾವಳಿ ತೆಗೆಯದೆ ಉತ್ಸವ ಮೂರ್ತಿ ಪೀಠದಿಂದ ತೆರವು ಮಾಡಲಾಗದ ತಂತ್ರಜ್ಞಾನ ಇದೆ. 1982-83ರಲ್ಲಿ ಸುರಿದ ಮಳೆಗೆ ದೇವಸ್ಥಾನ ಪಕ್ಕದಲ್ಲಿ ಹರಿಯುವ ವಾರಾಹಿ ನದಿ ಉಕ್ಕಿ ಹರಿಯುವ ಮೂಲಕ ದೇವಸ್ಥಾನ ಅವನತಿಗೆ ಮುನ್ನುಡಿಯಾಯಿತು. ಅತಿವೃಷ್ಟಿಗೆ ದೇವಸ್ಥಾನ ಅರ್ಧ ಮುಳುಗಿ ಗೋಡೆ ಕುಸಿದು ಸುತ್ತಲಿನ ಪೌಳಿ ಕುಸಿದಿತ್ತು.
ಸರ್ಕಾರದ ಸಹಾಯ ನಿರೀಕ್ಷೆ
ಸೌಡ ಶ್ರೀ ವೆಂಕಟರಮಣ ದೇವಸ್ಥಾನ, ಶ್ರೀ ಸಾಂಬ ಸದಾಶಿವ ದೇವಸ್ಥಾನ, ಗಣಪತಿ ದೇವಸ್ಥಾನ, ನಂದಿ ಚಿಕ್ಕಮ್ಮ ಯಡಮಕ್ಕಿ, ಎಂಟು ದಿಕ್ಕಿಗೆ ಎಂಟು ಬೊಬ್ಬರ್ಯ ದೈವಸ್ಥಾನವಿದೆ. 2 ಕೋಟಿ ರೂ. ವೆಚ್ಚದಲ್ಲಿ ಸಾಂಬ ಸದಾಶಿವ ದೇವಸ್ಥಾನ ಜೀರ್ಣೋದ್ಧಾರ ನಡೆದಿದೆ. 30 ವರ್ಷದಿಂದ ನಿಂತು ಹೋಗಿದ್ದ ರಥೋತ್ಸವ ಪುನರಾರಂಭಿಸಿದ್ದು, ವೆಂಕಟರಮಣ ದೇವಸ್ಥಾನ ಅಭಿವೃದ್ಧಿಯಾಗಬೇಕು ಎಂಬುದು ನಮ್ಮ ಕನಸು ಎನ್ನುತ್ತಾರೆ ಜೀರ್ಣೋದ್ಧಾರ ಸಮಿತಿ ಸದಸ್ಯ ವೆಂಕಟೇಶ ಭಂಡಾರ‌್ಕರ್
ನಮ್ಮೂರಲ್ಲಿ ಒಟ್ಟು 80 ಮನೆಯಿದ್ದು, ಬಡವರೇ ಜಾಸ್ತಿ. ಜೀರ್ಣೋದ್ಧಾರಕ್ಕೆ 5 ಕೋಟಿ ರೂ. ಹೊಂದಿಸುವುದು ಕಷ್ಟ. ದೇವಸ್ಥಾನ ಪೂಜೆ ನಿಲ್ಲಬಾರದು ಎಂಬ ಉದ್ದೇಶದಿಂದ ಸಾಂಬ ಸದಾಶಿವ ದೇವಸ್ಥಾನ ಅರ್ಚಕರಿಂದ ಪೂಜೆ ನಡೆಯುತ್ತಿದೆ. ಭಕ್ತರು ಹಾಗೂ ಸರ್ಕಾರ ಕೈ ಜೋಡಿಸಿದರೆ ದೇವಸ್ಥಾನ ಪುನರುದ್ಧಾರ ಸಾಧ್ಯ.
ಕೃಷ್ಣಮೂರ್ತಿ ಬಾಯರಿ, ಸೌಡ ನಿವಾಸಿ
ಹಳೇ ಅಗ್ರಹಾರ ಹಿಂದೆ ಪ್ರಸಿದ್ಧ ಬಂದರು ಕೇಂದ್ರವಾಗಿತ್ತು. ಈಗಿನ ಶಂಕರನಾರಾಯಣ ಪೇಟೆ ಹೇಗಿತ್ತೋ ಹಾಗೆ ಹಳೇ ಅಗ್ರಹಾರವೂ ಇತ್ತು. ಸಂಚಾರ ವ್ಯವಸ್ಥೆ ಬದಲಾಗಿ, ಬಂದರು ನಿಂತಿದ್ದರಿಂದ ಜನಸಂಖ್ಯೆ ವಿರಳವಾಗಿ ದೇವಸ್ಥಾನ ಅವನತಿ ಹಾದಿ ಹಿಡಿದಿರುವ ಸಾಧ್ಯತೆಯಿದೆ. ಸೌಡ ನದಿಗೆ ಸೇತುವೆಯಾದರೆ ಮತ್ತೆ ಹಳೇ ಅಗ್ರಹಾರ ಗತವೈಭವ ಮರಳಿ ಪಡೆಯುವ ಜತೆ ದೇವಸ್ಥಾನ ಪುನರುತ್ಥಾನಕ್ಕೂ ಅನುಕೂಲವಾಗಲಿದೆ.
ಚಿಟ್ಟೆ ರಾಜಗೋಪಾಲ ಹೆಗ್ಡೆ, ಸಂಚಾಲಕ ಶಂಕರನಾರಾಯಣ ತಾಲೂಕು ಹೋರಾಟ ಸಮಿತಿ