ಮಂಡ್ಯ: ಸೈಬರ್ ಅಪರಾಧ ಹೆಚ್ಚಾಗಿರುವಂತಹ ಸಂದರ್ಭದಲ್ಲಿ ಅಕ್ಷರಸ್ಥರು ಕೂಡ ವಂಚನೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಅಂತಹವರ ಬಗ್ಗೆ ಜಾಗೃತರಾಗಿರಬೇಕು ಎಂದು ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ) ಪ್ರಧಾನ ವ್ಯವಸ್ಥಾಪಕ ಪ್ರಫುಲ್‌ಕುಮಾರ್ ಜಿನಾ ಸಲಹೆ ನೀಡಿದರು.
ತಾಲೂಕಿನ ಹೊಳಲು ಗ್ರಾಮದಲ್ಲಿ ಎಸ್‌ಬಿಐ ಬ್ಯಾಂಕ್‌ನಿಂದ ಆಯೋಜಿಸಿದ್ದ ಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನದಲ್ಲಿ ಮಾತನಾಡಿದ ಅವರು, ಸಾಮಾಜಿಕ ಭದ್ರತಾ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿ ಎಂಬ ಆಶಯ ವ್ಯಕ್ತಪಡಿಸಿದರು.
ಉಪಪ್ರಧಾನ ವ್ಯವಸ್ಥಾಪಕ ವೆಂಕಟ್ ರಘುರಾಮನ್ ಮಾತನಾಡಿ, ಜನ್‌ಧನ್ ಯೋಜನೆ ಮತ್ತು ಇತರೆ ಉಳಿತಾಯ ಖಾತೆ ಹೊಂದಿರುವವರು, 10 ವರ್ಷ ತುಂಬುತ್ತಿರುವ ಖಾತೆದಾರರು ತಪ್ಪದೇ ಕೆವೈಸಿ ಮಾಡಿಸಿ ಖಾತೆಗಳು ನಿಷ್ಕ್ರಿಯಗೊಳ್ಳುವುದನ್ನು ತಪ್ಪಿಸಿ ಎಂದರು.
ಆರ್ಥಿಕ ಸಾಕ್ಷರತಾ ಸಮಾಲೋಚಕಿ ಕೆ.ಪಿ.ಅರುಣಾಕುಮಾರಿ ಹಾಗೂ ಪ್ರಾದೇಶಿಕ ವ್ಯವಸ್ಥಾಪಕಿ ಸುಮನಾ ಬ್ಯಾಂಕ್‌ನ ವಿವಿಧ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮ್ಯಾ ಚೇತನ್, ಪಿಡಿಒ ಸಂತೋಷ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಬಿ.ದೊಡ್ಡೇಗೌಡ, ಬ್ಯಾಂಕ್‌ನ ಕಸ್ತೂರಿ, ಧೀರೇಂದ್ರ, ಕುಶಾಲ್, ಡಾ.ಶುಭಶ್ರೀ, ವಿಕಾಸ್ ಇತರರಿದ್ದರು.
ಇದೇ ಸಂದರ್ಭದಲ್ಲಿ ಸಾಲ ಮಂಜೂರಾತಿ ಪ್ರಮಾಣ ಪತ್ರ, ವಿದ್ಯಾರ್ಥಿಗಳಿಗೆ ಪಾಸ್‌ಬುಕ್ ವಿತರಣೆ ಹಾಗೂ ಆರ್ಥಿಕ ಸಾಕ್ಷರತೆ ಕುರಿತು ಪರಿಸರ ಸಂಸ್ಥೆಯಿಂದ ಜಾಗೃತಿ ನಾಟಕ ಆಯೋಜಿಸಲಾಗಿತ್ತು. ಅಂತೆಯೇ ಸಾಮಾಜಿಕ ಭದ್ರತಾ ಯೋಜನೆಗೆ ನೋಂದಾಯಿಸಿಕೊಳ್ಳಲಾಯಿತು.